ಕುಂಬಳೆ: ಕೊಂಡೆವೂರಿನ ನಿತ್ಯಾನಂದ ಯೋಗಾಶ್ರಮದಲ್ಲಿ ಗಾಯತ್ರೀ ದೇವಿಯ ಹಾಗೂ ಭಗವಾನ್ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತ್ಯುತ್ಸವ ಅಂಗವಾಗಿ ಗಣಯಾಗ, ಅಧಿವಾಸ ಹೋಮ, ಕಲಶಾಭಿಷೇಕ ಮತ್ತು ಚಂಡಿಕಾ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರು ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕಟೀಲಿನ ಅನಂತಪದ್ಮನಾಭ ಆಸ್ರಣ್ಣರವರ ಆಚಾರ್ಯತ್ವದಲ್ಲಿ ಜರಗಿತು.
ಯತಿದ್ವಯರ, ಕಟೀಲಿನ ಹರಿನಾರಾಯಣ ದಾಸ ಆಸ್ರಣ್ಣ ಮತ್ತು ಕಮಲಾದೇವೀ ಪ್ರಸಾದ ಆಸ್ರಣ್ಣ ರವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಿತು. ಮಾಣಿಲ ಶ್ರಿಗಳು ತಮ್ಮ ಆಶೀರ್ವಚನದಲ್ಲಿ ರಾಷ್ಟ್ರ ಬೆಳೆಯಲು ನಮ್ಮ ಆಚರಣೆಗಳು ಉಳಿಯಬೇಕು ಎಂದರು. ಕೊಂಡೆವೂರುಶ್ರೀಗಳು ತಮ್ಮ ಆಶೀರ್ವಚನದಲ್ಲಿ ಸಮಸ್ತರ ಬೆಂಬಲದಿಂದ ಸವಾಲುಗಳನ್ನೆದುರಿಸಿ ಮಠ ಬೆಳೆಯುತ್ತಿದೆ, ಅಳಿಯುತ್ತಿರುವ ಕಾಸರಗೋಡು ತಳಿಯ ಗೋಸಂರಕ್ಷಣೆಗಾಗಿ ಸಮಸ್ತ ಸಮಾಜ ಕೈ ಜೋಡಿಸಿದರೆ ಈ ಮಹಾನ್ ಕಾರ್ಯದಲ್ಲಿ ಶ್ರೀಮಠ ದಿಟ್ಟ ಹೆಜ್ಜೆಯನ್ನಿಟ್ಟು ಪವಿತ್ರ ಗೋಮಾತೆ ಸೇವೆ, ಸಂರಕ್ಷಣೆಯಲ್ಲಿ ಮುನ್ನಡೆಯಲಿದೆ ಎಂದರು.