ಕುಂಭಾಸಿ : ಪುರಾಣ ಪ್ರಸಿದ್ಧ ಸಪ್ತಕ್ಷೇತ್ರಗಳಲ್ಲಿ ಒಂದಾದ ಕುಂಭಾಸಿ ಶ್ರೀ ಮಹಾಲಿಂಗೇಶ್ವರ (ಹರಿಹರ) ದೇವರ ದಿವ್ಯ ಸನ್ನಿಧಿಯಲ್ಲಿ ಜ.16 ರಂದು ಶ್ರೀ ಮನ್ಮಹಾ ರಥೋತ್ಸವವು ಜರಗಿತು.
ಶ್ರೀ ಮನ್ಮಹಾರಥ ಚಾಲನೆಗೆ ಭಕ್ತರೊಂದಿಗೆ ಕೈಜೋಡಿಸಿದ ಶ್ರೀ ರಘುವರೇಂದ್ರ ಶ್ರೀ ಶ್ರೀ ಮನ್ಮಹಾ ರಥೋತ್ಸವಕ್ಕೂ ಮುನ್ನ ಸಂಪ್ರದಾಯದಂತೆ ಭೀಮನಕಟ್ಟೆ ಶ್ರೀ ರಘುವರೇಂದ್ರ ತೀರ್ಥ ಪಾದಂಗಳವರು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಅನಂತರ ಸ್ವತಃ ಶ್ರೀಗಳು ಶ್ರೀ ಮನ್ಮಹಾ ರಥದ ಚಾಲನೆಗಾಗಿ ಭಕ್ತರೊಂದಿಗೆ ಕೈಜೋಡಿಸಿದರು.
ಆಕರ್ಷಕ ತಟ್ಟಿರಾಯ
ಹಾಗೂ ನಾದಸ್ವರ
ಸಪ್ತಕ್ಷೇತ್ರಗಳಲ್ಲಿ ಒಂದಾದ ಪುರಾಣ ಪ್ರಸಿದ್ಧ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಆಕರ್ಷಕ ತಟ್ಟಿರಾಯ ಉತ್ಸವದ ಕೇಂದ್ರವಾಗಿದ್ದು ಜತೆಗೆ ಸ್ಥಳೀಯರಾದ ಕೃಷ್ಣ ದೇವಾಡಿಗ ಮತ್ತು ತಂಡದವರ ಪಂಚವಾದ್ಯಗಳು ಹಾಗೂ ಕೋಟೇಶ್ವರ ಸಂಜೀವ ದೇವಾಡಿಗ ಮತ್ತು ತಂಡದವರ ನಾಗಸ್ವರ ವಾದನ ಆಕರ್ಷಣೀಯವಾಗಿದೆ.
ಪಾನಕ ಸೇವೆ
ರಥೋತ್ಸವದ ಅಂಗವಾಗಿ ಭಕ್ತರಿಗೆ ಲಘು ಉಪಹಾರದ ವ್ಯವಸ್ಥೆಯನ್ನು ದಿ| ನಾರಾಯಣ ಪ್ರಭು ಅವರ ಪುತ್ರರಾದ ಪುರುಷೋತ್ತಮ ಪ್ರಭು ಮತ್ತು ಕೆ.ರಾಧಾಕೃಷ್ಣ ಪ್ರಭು ಕುಂಭಾಸಿ ಹಾಗೂ ಕೆ.ಆರ್.ನಗರದ ದಿ| ಜಿ.ಎಂ. ಕೃಷ್ಣರ ಸ್ಮರಣಾರ್ಥ ಮಕ್ಕಳಿಂದ ಭಕ್ತರಿಗೆ ಪಾನಕ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಕೆ.ವಿ.ಮಹಾಬಲ ಭಟ್, ಪ್ರಧಾನ ಅರ್ಚಕ ಕೆ.ವೆಂಕಟೇಶ್ ಭಟ್, ವಿದ್ವಾನ್ ಶ್ರೀಪತಿ ಉಪಾಧ್ಯಾಯ, ಮೆನೇಜರ್ ರಾಘವೇಂದ್ರ ರಾವ್ ಕುಂಭಾಸಿ ಹಾಗೂ ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದರು.
ಚಿತ್ರ: ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ