ತೆಕ್ಕಟ್ಟೆ: ರಾಜ್ಯದಲ್ಲಿಯೇ ಅತ್ಯಂತ ಸುಂದರವಾದ ದೇಗುಲ ಇದಾಗಿದ್ದು ಆಗಮಶಾಸ್ತ್ರದಂತೆ ಸಕಲ ಸಿದ್ಧತೆಗಳೊಂದಿಗೆ ಪೂರ್ಣಗೊಂಡಿರುವ ಈ ಹೊಸ ಕ್ಷೇತ್ರ ಭಕ್ತರನ್ನು ಆಕರ್ಷಿಸುವಂತಾಗಲಿ ಎಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು.
ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ಶಿಲಾಮಯ ಗರ್ಭಗೃಹದ ನೂತನ ದೇಗುಲ ಸಮರ್ಪಣೆ, ಶ್ರೀ ರಾಜಗೋಪುರ ಲೋಕಾರ್ಪಣೆ ಮತ್ತು ಬಿಂಬ ಪ್ರತಿಷ್ಠೆ ಕಡುಶರ್ಕರ ಲೇಪನ ಸಹಿತ ಸಹಸ್ರ ಕಲಶ ಸಹಿತ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮವು ಎ. 27ರಿಂದ ಮೇ 5ರ ಪರ್ಯಂತ ನಡೆಯುವ ಹಿನ್ನೆಲೆಯಲ್ಲಿ ಮುದ್ರಿತವಾದ ಆಮಂತ್ರಣ ಪತ್ರಿಕೆ ಮಾ. 18ರಂದು ಅನಾವರಣಗೊಳಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ರಾಮಕ್ಷತ್ರಿಯ ಸಮುದಾಯದ ಹಿರಿಯ ಮುಖಂಡ ದತ್ತಾನಂದ, ಪಡುಬಿದ್ರಿ ಶ್ರೀ ಖಡ್ಗೇಶ್ವರೀ ದೇವಸ್ಥಾನದ ಗುರಿಕಾರ ಪದ್ಮನಾಭ ಕೊರ್ನೆಯರ್, ವೇ| ಮೂ| ಕೆ.ಶ್ರೀಧರ ಉಪಾಧ್ಯಾಯ, ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಗೋಪಾಲಕೃಷ್ಣ ಶೆಟ್ಟಿ, ಕೋಟೇಶ್ವರ ಶ್ರೀ ವಿಶ್ವಕರ್ಮ ಸಂಘದ ಅಧ್ಯಕ್ಷ ನೇರಂಬಳ್ಳಿ ಪ್ರಕಾಶ್ ಆಚಾರ್ಯ, ವಾಸ್ತುಶಾಸ್ತ್ರಜ್ಞ ಬಸವರಾಜ್ ಶೆಟ್ಟಿಗಾರ್, ಉದ್ಯಮಿ ನಾಗರಾಜ ಕಾಮಧೇನು, ಕೊಗ್ಗ ಗಾಣಿಗ, ಕುಂದಾಪುರ ಶ್ರೀ ಮೈಲಾರೇಶ್ವರ ದೇವಸ್ಥಾನದ ಅಣ್ಣಪ್ಪಯ್ಯ ಮಾಸ್ಟರ್, ನಾಗೇಶ್ ಬಿ., ಕುಂದಾಪುರ ಶ್ರೀ ಮಹಾಂಕಾಳಿ ದೇಗುಲದ ಆಡಳಿತ ಮೊಕ್ತೇಸರ ಜಯಾನಂದ ಖಾರ್ವಿ, ಕಾವೇರಿಯಮ್ಮ, ಯಶವಂತ್ ಕುಂಭಾಶಿ ಮತ್ತಿತರರಿದ್ದರು.
ಕ್ಷೇತ್ರದ ಪ್ರಧಾನ ವ್ಯವಸ್ಥಾಪಕ ದೇವರಾಯ ಎಂ. ಶೇರೆಗಾರ್ ಸ್ವಾಗತಿಸಿ, ಉಪನ್ಯಾಸಕ ನಿತ್ಯಾನಂದ ಪ್ರಸ್ತಾವಿಸಿದರು. ರಾಜಶೇಖರ ಹೆಗ್ಡೆ ನಿರೂಪಿಸಿ, ವಂದಿಸಿದರು.