ಕುಂಬಳೆ: ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಕಳೆದ ಜ.14 ರಂದು ಆರಂಭಗೊಂಡ ವಾರ್ಷಿಕ ಜಾತ್ರಾ ಮಹೋತ್ಸವವು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶನಿವಾರದಂದು ಸಂಪನ್ನಗೊಂಡಿತು.
ಶ್ರೀ ಕ್ಷೇತ್ರದಿಂದ ದೇವರ ಮೆರವಣಿಗೆ ವಾದ್ಯಘೋಶದೊಂದಿಗೆ ಬೆಡಿಕಟ್ಟೆಗೆ ಸಾಗಿ ಅಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಬಾಲ ಕೃಷ್ಣ ತಂತ್ರಿಯವರಿಂದ ವೈದಿಕ ವಿಧಿವಿ ಧಾನಗಳೊಂದಿಗೆ ಕಟ್ಟೆಪೂಜೆ ನಡೆದ ಬಳಿಕ ಇತಿಹಾಸ ಪ್ರಸಿದ್ಧ ಕುಂಬಳೆ ಬೆಡಿ ಶುಕ್ರವಾರ ರಾತ್ರಿ ನಡೆಯಿತು.ಕಲರ್ ಔಟ್ಗಳು ಮತ್ತು ಡಬ್ಬಲ್ ಗುಂಡುಗಳು ಆಕಾಶದಲ್ಲಿ ಬಣ್ಣಬಣ್ಣದ ಚಿತ್ತಾರವನ್ನು ಮೂಡಿಸಿತಲ್ಲದೆ ಬೆಡಿ ಮೈದಾನದಲ್ಲಿ ಸಿಡಿದ ಬೆಡಿಗಳು ಭಕ್ತರನ್ನು ಬಣ್ಣದ ಲೋಕದಲ್ಲಿ ತೇಲಿಸಿ ನೆರೆದವರನ್ನು ಮಂತ್ರಮುಗ್ಧಗೊಳಿಸಿತು.ಕೊನೆಯ ಫಿನಿಶಿಂಗ್ ಪಾಯಿಂಟ್ನ ಗುಂಡಿನಮಾಲೆ ಪ್ರಖರ ಬೆಳಕಿನೊಂದಿಗೆ ಭಯಾನಕ ಶಬ್ಧಗಳಲ್ಲಿ ಸಿಡಿದು ಕ್ಷಣಕಾಲ ರಾತ್ರಿಯನ್ನು ಹಗಲಾಗಿಸಿತು.ಸುಮಾರು ಒಂದು ಗಂಟೆ ಕಾಲ ಸಿಡಿದ ಬೆಡಿ ಪ್ರದರ್ಶನ ಭಕ್ತರ ಕಣ್ಮನ ತಣಿಸಿತು.ಮಕ್ಕಳು ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಸುಡುಮದ್ದು ಪ್ರದರ್ಶನ ವೀಕ್ಷಿಸಲು ಭಕ್ತರು ಆಗಮಿಸಿದ್ದರು.ದೂರದೂರಿನಿಂದಲೂ ವಿಶೇಷ ವಾಹನಗಳ ಮೂಲಕ ಬೆಡಿ ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಕಾರ್ಯಕ್ರಮ ಸುಗಮವಾಗಿ ನಡೆ ಯಲು ಬಿಗು ಪೊಲೀಸ್ ವ್ಯವಸ್ಥೆ ಮಾಡ ಲಾಗಿತ್ತು. 100 ಕ್ಕೂ ಮಿಕ್ಕಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಎರಡು ಹೆಲಿಕ್ಯಾಂ ಡ್ರೋಣ್ ಕ್ಯಾಮರಾದ ವ್ಯವಸ್ಥೆ ಮಾಡ ಲಾಗಿತ್ತು.ಹೆಚ್ಚಿನಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.
ಕಾಸರಗೋಡು ಪ್ರಭಾರ ಡಿವೈಸ್ಪಿ ಹಸೈನಾರ್, ಕುಂಬಳೆ, ಮಂಜೇಶ್ವರ, ಆಡೂರು, ಬದಿಯಡ್ಕ ಠಾಣೆಗಳ ಸಿಐ ಅವರು ಅಗ್ನಿಶಾಮಕದಳ ತಂಡದ ಅಧಿಕಾರಿಗಳು ವಿಶೇಷ ನಿಗಾ ವಹಿಸಿದರು.
ಜ.18 ರಂದು ಬೆಳಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ,ಮಧ್ಯಾಹ್ನ ಮಹಾ ಪೂಜೆಯ ಬಳಿಕ ಬಾಲಕೃಷ್ಣ ಪುರುಷ ದಂಪತಿ ಮುಂಬಯಿ ಮತ್ತು ಶ್ಯಾಮ ಪ್ರಸಾದ್ ದಂಪತಿ ಬರೋಡ ಅವರಿಂದ ಅನ್ನ ಸಂತರ್ಪಣೆ ನಡೆಯಿತು. ಸಂಜೆ ನಡೆತೆರೆದು, ದೀಪಾರಾಧನೆ ನಡೆಯಿತು, ರಾತ್ರಿಬಲಿ, ಘೋಷಯಾತ್ರೆಯ ಬಳಿಕ ಶೇಡಿಗುಮ್ಮೆಯಲ್ಲಿ ಅವಭೃತ ಸ್ನಾನ ನಡೆಯಿತು. ಮಧ್ಯರಾತ್ರಿ ಬಟ್ಟಲು ಕಾಣಿಕೆ,ರಾಜಾಂಗಣ ಪ್ರಸಾದದ ಬಳಿಕ ಧ್ವಜಾವರೋಹಣ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಜೆ ಯಕ್ಷಧ್ರುವ ಪಟ್ಲ ಫೌಡೇಶನ್ ಕುಂಬಳೆ ಘಟಕದ ವತಿಯಿಂದ ಯಕ್ಷಗಾನ ವೈಭವ ರಂಜಿಸಿತು.ರಾತ್ರಿ ಮುಜಂಗಾವು ಯಕ್ಷಮಿತ್ರರು ತಂಡದಿಂದ ಮಹಾಶೂರ ಭೌಮಾಸುರ ಯಕ್ಷಗಾನ ಬಯಲಾಟ ನಡೆಯಿತು.