ಹಿರಿಯರನ್ನು ಗೌರವಿಸುವುದೇ ಭಕ್ತಿ: ಕೃಷ್ಣಪ್ಪ ಪೂಜಾರಿ
ಮಹಾನಗರ: ಬ್ರಹ್ಮಶ್ರೀ ನಾರಾಯಣಗುರುಗಳ ಜನನವಾದ ಅನಂತರ ನಮ್ಮ ಸಮಾಜ ತಲೆಯೆತ್ತಿ ನಡೆಯುವಂತಾಗಿದೆ ಎಂದು ಬೆಳ್ತಂಗಡಿ ಗುರುದೇವಾ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ ತಿಳಿಸಿದರು.
ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕುಳಾಯಿಯಲ್ಲಿ ಯುವವಾಹಿನಿ ಸುರತ್ಕಲ್ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ಜರಗಿದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 164ನೇ ಜಯಂತಿಯ ಪ್ರಯುಕ್ತ ಶ್ರೀ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹಿರಿಯರನ್ನು ಗೌರವಿಸುವುದೇ ಭಕ್ತಿ. ಎಲ್ಲವನ್ನೂ ನಡೆಸುತ್ತಿರುವ ಶಕ್ತಿಯೇ ಬೇರೆ ಇದೆ. ತಾನು ಆ ಶಕ್ತಿಗಿಂತ ಬೇರೆ ಹಾಗೂ ಕಿರಿಯ ಎಂದು ಮಾನವ ಅಂದುಕೊಂಡಾಗ ಆ ಅದ್ಭುತ, ಅಗಮ್ಯ ಚೈತನ್ಯಕ್ಕೆ ಪ್ರೀತಿಯಿಂದ, ಆರಾಧನೆ, ಪೂಜೆ, ಭಜನೆ ಮಾಡುವಂಥ ನೆಲೆಯೇ ಭಕ್ತಿಯಾಗಿದೆ ಎಂದರು.
ಕಾರ್ಯಕ್ರಮವನ್ನು ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ್ ಕುಳಾಯಿ ಉದ್ಘಾಟಿಸಿದರು. ಯುವ ವಾಹಿನಿ ಸುರತ್ಕಲ್ ಘಟಕದ ಅಧ್ಯಕ್ಷ ಅಶೋಕ್ ಕುಳಾಯಿ ಅಧ್ಯಕ್ಷತೆ ವಹಿಸಿದ್ದರು.
ತತ್ತ್ವ ಪಸರಿಸಲಿ
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಸಾಧು ಪೂಜಾರಿ ಮಾತನಾಡಿ, ಗುರುಜಯಂತಿ ಆಚರಣೆ, ಗುರು ಸಂದೇಶ ಯಾತ್ರೆಗಳು, ಗುರು ಸ್ಮರಣೆಯಂತಹ ಕಾರ್ಯಕ್ರಮಗಳ ಮೂಲಕ ನಾವು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತತ್ತ್ವ, ಸಂದೇಶ ಮತ್ತು ಚಿಂತನೆಗಳನ್ನು ಸಮಾಜದಲ್ಲಿ ಪಸರಿಸಬೇಕು ಎಂದರು.
ಉದ್ಯಮಿ ಶ್ರೀಧರ್ ಬಿ. ಕೋಟ್ಯಾನ್, ಪಾಲಿಕೆಯ ತೆರಿಗೆ ಹಾಗೂ ಹಣಕಾಸು ಅಪೀಲು ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಭಜನ ಸ್ಪರ್ಧೆ
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಕ್ತಿಗೀತೆ ಭಜನ ಸ್ಪರ್ಧೆಯನ್ನು ಆಯೋಜಿಸಿದ್ದು, ಸುಮಾರು 9 ಶಾಲೆಯ 100ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗ ವಹಿಸಿದ ಎಲ್ಲ ಶಾಲೆಗಳಿಗೆ ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು.
ಬಹುಮಾನ ವಿತರಣೆ
ಪ್ರಥಮ ಬಹುಮಾನವನ್ನು ಅಂಕುರ್ ಶಾಲೆ ಕುಳಾಯಿ, ದ್ವಿತೀಯ ಬಹು ಮಾನವನ್ನು ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆ ಇಡ್ಯಾ ಸುರತ್ಕಲ್ ಹಾಗೂ ತೃತೀಯ ಬಹುಮಾನವನ್ನು ಶ್ರೀ ನಾರಾಯಣಗುರು ಶಾಲೆ ಕಾಟಿಪಳ್ಳ ಪಡೆದುಕೊಂಡಿದೆ.
ಸ್ಪರ್ಧೆಯ ತೀರ್ಪುಗಾರರಾಗಿ ಜಯಂತ್ ಬೋಳೂರು, ನಮಿತಾ ಪ್ರೇಮ್ ಪಡುಬಿದ್ರಿ, ಲಕ್ಷ್ಮೀಧರ ಮೂಡಬಿದಿರೆ ಭಾಗವಹಿಸಿದ್ದರು. ಬಿಲ್ಲವ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿ ಸಲಾಯಿತು. ಬಿಲ್ಲವ ಸಮುದಾಯದ ಬಡ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಘಟಕದ ಪರ ವಾಗಿ ನೀಡಲಾಯಿತು.
ಕಾರ್ಯದರ್ಶಿ ರಂಜಿತ್ ಕುಮಾರ್, ಕಾರ್ಯಕ್ರಮದ ಸಂಚಾಲಕರಾದ ರವೀಂದ್ರ ಸಸಿಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ ಸುರತ್ಕಲ್ ಘಟಕದ ಅಧ್ಯಕ್ಷ ಅಶೋಕ್ ಪ್ರಸ್ತಾವನೆ ಮೂಲಕ ಸ್ವಾಗತಿಸಿದರು. ಕುಟುಂಬ ಸಂಪರ್ಕ ನಿರ್ದೇಶಕರಾದ ತಾರಾ ಅಶೋಕ್ ವಂದಿಸಿ, ಮಾಜಿ ಅಧ್ಯಕ್ಷ ಭಾಸ್ಕರ್ ಸಾಲ್ಯಾನ್ ನಿರೂಪಿಸಿದರು.