ಸುಬ್ರಹ್ಮಣ್ಯ: ಸ್ಕಂದ ಪಂಚಮಿಯ ದಿನ ಬುಧವಾರ ಶ್ರೀ ದೇಗುಲದಲ್ಲಿ ತೈಲಾ ಭ್ಯಂಜನ ನೆರವೇರಿತು. ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಮತ್ತು ಸಹಾಯಕ ಕಾರ್ಯನಿರ್ವಹಣಾ ಕಾರಿಗಳಿಗೆ ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ದೇವಸ್ಥಾನದ ಹೆಬ್ಟಾರ್ ಷಣ್ಮುಖ ಉಪಾರ್ಣ ತೈಲವನ್ನು ಹಚ್ಚಿದರು. ಈ ಮೂಲಕ ತೈಲಾಭ್ಯಂಜನ ನೆರವೇರಿತು. ಮಧ್ಯಾಹ್ನದ ಸುಮುಹೂರ್ತದಲ್ಲಿ ದೇಗುಲದ ಒಳಾಂಗಣದಲ್ಲಿ ಮತ್ತು ಅಂಗಡಿ ಗುಡ್ಡೆಯ ಅನ್ನಛತ್ರದಲ್ಲಿ ಅನ್ನ ಪ್ರಸಾದಕ್ಕೆ ಪಲ್ಲಪೂಜೆ ನೆರವೇರಿತು.
ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ಸೀತಾರಾಮ ಎಡಪಡಿತ್ತಾಯರು ಒಳಾಂಗಣದಲ್ಲಿ ಪಲ್ಲಪೂಜೆ ನೆರವೇರಿಸಿದರು. ಬಳಿಕ ಅಕ್ಷಯ ಪಾತ್ರೆಗೆ ಪೂಜೆ ಮಾಡಿದರು. ಪುರೋಹಿತ ಪ್ರಸನ್ನ ಹೊಳ್ಳ ಅಂಗಡಿಗುಡ್ಡೆಯ ಅನ್ನಛತ್ರದಲ್ಲಿ ಅನ್ನಬ್ರಹ್ಮನಿಗೆ ಪೂಜೆ ಸಲ್ಲಿಸಿದರು.
ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತ ಪ್ರೊ| ಶಿವಕುಮಾರ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್., ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಹೇಶ್ ಕುಮಾರ್ ಕೆ.ಎಸ್., ಕೃಷ್ಣಮೂರ್ತಿ ಭಟ್, ಬಾಲಕೃಷ್ಣ ಬಳ್ಳೇರಿ, ಕೇನ್ಯ ರವೀಂದ್ರನಾಥ ಶೆಟ್ಟಿ, ರಾಜೀವಿ ಆರ್. ರೈ, ದಮಯಂತಿ ಕೂಜುಗೋಡು, ಮಾಧವ ಡಿ., ಮಾಸ್ಟರ್ ಪ್ಲಾನ್ ಸದಸ್ಯರಾದ, ಶಿವರಾಮ ರೈ, ಸುಧೀರ್ಕುಮಾರ್ ಶೆಟ್ಟಿ, ಲೋಲಾಕ್ಷ ಕೈಕಂಬ ಉಪಸ್ಥಿತರಿದ್ದರು.
ನೂತನ ಕಟ್ಟೆಯಲ್ಲಿ ಶಿಖರ ಪ್ರತಿಷ್ಠೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತಕ್ಕೊಳಪಟ್ಟ ಬಿಲದ್ವಾರ ಮಂಟಪದ ಪೂರ್ವ ಭಾಗದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ದೇವರ ಕಟ್ಟೆಯಲ್ಲಿ ಶಿಖರ ಪ್ರತಿಷ್ಠೆ ಬುಧವಾರ ಮುಂಜಾನೆ 9.45ರ ಸುಮುಹೂರ್ತದಲ್ಲಿ ನೆರವೇರಿತು. ದೇಗುಲದ ಪ್ರಧಾನ ಅರ್ಚಕ ವೇ|ಮೂ| ಸೀತಾರಾಮ ಎಡಪಡಿತ್ತಾಯರ ನಿರ್ದೇಶನದಲ್ಲಿ ಪುರೋಹಿತ ವೇ|ಮೂ| ಮಧು ಸೂದನ ಕಲ್ಲೂರಾಯ, ಸುಬ್ರಹ್ಮಣ್ಯ ಕೋರ್ನಾಯ, ರಾಜೀವ ಕೊಕ್ಕಡ, ವೆಂಕಟಕೃಷ್ಣ ಕಲ್ಲೂರಾಯ, ವಾಸುದೇವ ರಾವ್ ವಿವಿಧ ವೈದಿಕ ವಿಧಿ-ವಿಧಾನ ನೆರವೇರಿಸಿದರು. ಮೊದಲು ಪವಮಾನ ಹೋಮ ನಡೆಯಿತು.