Home ಧಾರ್ಮಿಕ ಸುದ್ದಿ ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿಗೆ ಸಕಲ ಸಿದ್ಧತೆ

ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿಗೆ ಸಕಲ ಸಿದ್ಧತೆ

1834
0
SHARE

ಸುಬ್ರಹ್ಮಣ್ಯ : ಭಕ್ತರ ಆರಾಧ್ಯ ದೇವರು ಕುಕ್ಕೆ ಶ್ರೀ ಸುಬ್ರಹ್ಮಣ್ಯನ ಜಾತ್ರೆಗೆ ದಿನಗಣನೆ ಆರಂಭವಾಗಿದೆ. ಡಿ. 12 ಮತ್ತು 13ರಂದು ನಡೆಯುವ ಚಂಪಾಷಷ್ಠಿ ಜಾತ್ರೆಗೆ ವಿಶೇಷ ರಂಗು ತುಂಬಲು ಸಕಲ ತಯಾರಿ ನಡೆದಿದೆ.

ಕ್ಷೇತ್ರದ ಪರಿಸರವನ್ನು ಶುಚಿಗೊಳಿಸುವ ಕಾರ್ಯ ನಡೆಸಲಾಗಿದೆ. ದೇವಸ್ಥಾನ ಹಾಗೂ ಕ್ಷೇತ್ರದ ಕಟ್ಟಡಗಳಿಗೆ ಬಣ್ಣ ಬಳಿಯಲಾಗಿದೆ. ಎತ್ತ ನೋಡಿದರತ್ತ ಜಾತ್ರೆ ಸಂಭ್ರಮ ಕಣ್ತುಂಬಿಕೊಳ್ಳುತ್ತಿದೆ. ದೇವಸ್ಥಾನ, ನಗರದ ಕಟ್ಟಡಗಳು ಅಂಗಡಿ ಮುಂಗಟ್ಟುಗಳು ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿದೆ.

ಮಡೆಸ್ನಾನ ಪ್ರಾರಂಭ
ಕ್ಷೇತ್ರದಲ್ಲಿ ಬೀದಿ ಮಡೆಸ್ನಾನ ಸೇವೆ ಆರಂಭ ಗೊಂಡಿದೆ. ಕುಮಾರಧಾರಾ- ಕಾಶಿಕಟ್ಟೆ ತನಕ ರಸ್ತೆ ವಿಸ್ತರಣೆ ಕಾಮಗಾರಿ ನಡೆದಿದೆ. ಬೀದಿ ಮಡೆಸ್ನಾನ ನಡೆಸುವ ಭಕ್ತರಿಗೆ ಇದು ಅನುಕೂಲವಾಗಿದೆ. ಈ ಮಾರ್ಗದಲ್ಲಿ ಕುಮಾರಧಾರಾ, ಕುಲ್ಕುಂದ ತನಕ ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ. ಎಚ್ಚರಿಕೆ ನಾಮಫಲಕವನ್ನೂ ರಸ್ತೆ ಬದಿ ಅಳವಡಿಸಲಾಗಿದೆ.

ಪಂಚಮಿ ದಿನ ಹಾಗೂ ಅವಭೃಥ ದಿನಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಭಕ್ತರಿಗೆ ಅನ್ನಪ್ರಸಾದ ನೀಡಲಾಗುತ್ತದೆ. ಭೋಜನಕ್ಕೆ ದೇಗುಲದ ಭೋಜನ ಶಾಲೆ, ಅಂಗಡಿಗುಡ್ಡೆಯಲ್ಲಿ ವಿಶಾಲ ಚಪ್ಪರ ವ್ಯವಸ್ಥೆ ಇರಲಿದೆ. ಸ್ವಯಂ ಸೇವಕರಿಗೆ, ಕರ್ತವ್ಯಕ್ಕೆ ಬರುವ ಸಿಬಂದಿಗೆ, ವಿದ್ಯಾರ್ಥಿಗಳಿಗೆ ಆದಿಸುಬ್ರಹ್ಮಣ್ಯದ ಸರ್ಪಸಂಸ್ಕಾರ ಸೇವಾರ್ಥಿ ಭೋಜನ ಶಾಲೆಯಲ್ಲಿ ಉಪಹಾರ ವ್ಯವಸ್ಥೆ ಇದೆ. ನೀರಿನ ವ್ಯವಸ್ಥೆ, ನೈರ್ಮಲ್ಯ ಕಾಪಾಡಿಕೊಳ್ಳಲು ಸೂಚಿಸಲಾಗಿದೆ.

ಜಾತ್ರೆ ಸಮಯ ಒತ್ತಡ ನಿಯಂತ್ರಣಕ್ಕೆ ಪ್ರವೇಶ ಗೋಪುರ, ಹೊರಾಂಗಣ, ಆದಿ ಸುಬ್ರಹ್ಮಣ್ಯ ಭೋಜನಶಾಲೆ ಮೊದಲಾದ ಕಡೆಗಳಲ್ಲಿ ಸ್ವಯಂ ಸೇವಕರು ಕಾರ್ಯ ನಿರ್ವಹಿಸಲಿದ್ದಾರೆ. ಜಾತ್ರೆ ಸಂದರ್ಭ ನಿರಂತರ ವಿದ್ಯುತ್‌ ಸರಬರಾಜು, ಶ್ರೀ ದೇವರ ದರ್ಶನಕ್ಕೆ ಬರುವ ವಿಶೇಷ ಗಣ್ಯರಿಗೆ ದರ್ಶನ, ವಸತಿ ವ್ಯವಸ್ಥೆ ಮಾಡಲಾಗಿದೆ. ಹರಕೆ ಬಲಿವಾಡುಗಳನ್ನು ಜಮಾ ಉಗ್ರಾಣದಲ್ಲಿ ಸ್ವೀಕರಿಸಲು ಆಶ್ಲೇಷಾ ಬಲಿ ವಸತಿಗೃಹ ಮಾಹಿತಿ ವಿಭಾಗ, ದಾಸ್ತಾನು ಇರಿಸಲು ಪಕ್ಕದ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಕುಡಿಯುವ ನೀರಿನ ವ್ಯವಸ್ಥೆ
ಕಾಶಿಕಟ್ಟೆ, ಬಿಲದ್ವಾರ, ಜೂನಿಯರ್‌ ಕಾಲೇಜು, ಕುಮಾರಧಾರ, ವಾಸುಕಿ ಛತ್ರ ಮುಂಭಾಗ, ಆದಿ ಸುಬ್ರಹ್ಮಣ್ಯ ಹೊರಾಂಗಣದಲ್ಲಿ ಗಾಂಗೇಯ ಛತ್ರದ ಪಕ್ಕ, ರಕ್ತೇಶ್ವರಿ ಗುಡಿ ಪಕ್ಕ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕು, ಕೆಎಸ್‌ಆರ್‌ಟಿಸಿ ಬಿಸ್‌ ನಿಲುಗಡೆ, ಬಿಲದ್ವಾರ ಎದುರು, ಅರಣ್ಯ ಇಲಾಖೆ ಕಚೇರಿ ಬಳಿ, ಪಾರ್ಕಿಂಗ್‌ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಹೊಟೇಲುಗಳಲ್ಲಿ ಬಿಸಿ ನೀರು ನೀಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ವಿಶೇಷ ತಪಾಸಣ ತಂಡ
ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಹೆಚ್ಚುವರಿ ತಾತ್ಕಾಲಿಕ ಶೌಚಾಲಯ ನಿರ್ಮಾಣ, ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಚೌತಿ, ಪಂಚಮಿ, ಷಷ್ಠಿ ಈ ಮೂರು ದಿನ ಮದ್ಯ ನಿಷೇ ಧಿಸಿ ಮದ್ಯದಂಗಡಿ, ಬಾರ್‌ ಮುಚ್ಚುವುದು. ಮಾಂಸ ಮಾರಾಟ, ಪ್ಲಾಸ್ಟಿಕ್‌ ಬಳಕೆ, ತಂಬಾಕು ಪದಾರ್ಥಗಳ ನಿಷೇ ಧಿಸುವುದು. ಇದಕ್ಕಾಗಿಯೇ ವಿಶೇಷ ತಪಾಸಣ ತಂಡ ರಚಿಸಲಾಗಿದೆ. ಲಗೇಜ್‌ ಕೊಠಡಿ, ಧ್ವನಿವರ್ಧಕ, ಪಾರ್ಕಿಂಗ್‌, ಡ್ರೆಸ್ಸಿಂಗ್‌, ಬೆಳಕು, ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕೃಷಿಮೇಳ, ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ.

ಅಲ್ಲಲ್ಲಿ ಸಿಸಿ
ಕೆಮರಾ ಅಳವಡಿಕೆ ಕಾನೂನು ಸುವ್ಯವಸ್ಥೆ ಕುರಿತು ಹೆಚ್ಚಿನ ನಿಗಾ ಇಡಲಾಗಿದೆ. ಅಹಿತಕರ ನಡೆಯದಂತೆ ಹೆಚ್ಚುವರಿ ಸಿಬಂದಿ, ಗೃಹರಕ್ಷಕ ದಳ ಹಾಗೂ ಸಿಸಿ ಟಿವಿ ಕೆಮರಾ ಅಳವಡಿಸಲಾಗಿದೆ. ಸೋಮವಾರ ಸಂಜೆ ವೇಳೆಗೆ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಬಹತೇಕ ಕಾರ್ಯ ಪೂರ್ಣವಾಗುತ್ತದೆ.
-ಗೋಪಾಲ ಪಿಎಸ್‌ಐ, ಸುಬ್ರಹ್ಮಣ್ಯ ಪೊಲೀಸ್‌ ಠಾಣೆ

LEAVE A REPLY

Please enter your comment!
Please enter your name here