ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಭಕ್ತಿ-ಸಡಗರ ದಿಂದ ಗುರುವಾರ ರಾತ್ರಿ ನೆರವೇರಿತು. ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ
ದೇವರ ಉತ್ಸವ ನಡೆಯಿತು. ರಥಬೀದಿ ಯಿಂದ ಕಾಶಿಕಟ್ಟೆ ತನಕ ಬೆಳಗಿದ ಲಕ್ಷ ಹಣತೆ ದೀಪದ ನಡುವೆ ಉತ್ಸವ ನೆರ ವೇರಿತು. ಈ ಮೂಲಕ ಶ್ರೀದೇವರ ರಥ ಬೀದಿ ಉತ್ಸವ ಆರಂಭವಾಯಿತು.
ಹೊರಾಂಗಣದ ಸುತ್ತ ಹಣತೆಗಳ ಸಾಲಿನ ದೀಪಾಲಂಕಾರದ ಜತೆಗೆ, ವಿದ್ಯುತ್ ಅಲಂಕಾರದಿಂದ ದೇವಸ್ಥಾನ ವಿಶೇಷವಾಗಿ ಕಂಗೊಳಿಸುತ್ತಿತ್ತು. ರಥಬೀದಿಯಿಂದ ಕಾಶಿಕಟ್ಟೆವರೆಗೆ ಬೆಳಗಿದ ಹಣತೆಗಳು ಲಕ್ಷದೀಪೋತ್ಸವಕ್ಕೆ ಮೆರುಗು ನೀಡಿದವು. ಸಹಸ್ರಾರು ಭಕ್ತರು ಚಂದ್ರಮಂಡಲ ರಥದಲ್ಲಿ ಉತ್ಸವ ವೀಕ್ಷಿಸಿ ಶ್ರೀ ದೇವರ ದರುಶನ ಪಡೆದು ಕೃತಾರ್ಥರಾದರು.
ಲಕ್ಷ ದೀಪೋತ್ಸವದ ಸಂದರ್ಭ ಈ ಬಾರಿ ಕ್ಷೇತ್ರದ ಇತಿಹಾಸ ದಲ್ಲಿ ಪ್ರಥಮ ಬಾರಿಗೆ ಲಕ್ಷಕ್ಕೂ ಮಿಕ್ಕಿದ ಹಣತೆಗಳನ್ನು ಹಚ್ಚಲಾಯಿತು. ಸಂಜೆ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಲಂಕೃತ ರಂಗಪೂಜೆ ನಡೆಯಿತು. ಆ ಬಳಿಕ ಪ್ರಧಾನ ದೇವಾಲಯದಲ್ಲಿ 16 ಮಡಿಕೆಗಳಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಮಾಡಿ ಅದರಲ್ಲಿ ನವಧಾನ್ಯಗಳನ್ನು ಬಿತ್ತುವ ಅಂಕುರಾರ್ಪಣೆ ನೆರವೇ ರಿತು. ಮಹಾಪೂಜೆ ಬಳಿಕ ಶ್ರೀ ದೇವರ ಹೊರಾಂಗಣ ಉತ್ಸವ ಆರಂಭವಾಯಿತು.
ಪ್ರಥಮವಾಗಿ ಕಾಚುಕುಜುಂಬ ದೈವವು ಶ್ರೀ ದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಿತು.ಬಳಿಕ ದೈವದ ನರ್ತನ ಸೇವೆ, ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ, ಪಾಲಕಿ ಉತ್ಸವ ನೆರವೇರಿತು. ಬಳಿಕ ಚಂದ್ರಮಂಡಲ ರಥದಲ್ಲಿ ಶ್ರೀ ದೇವರ ಉತ್ಸವವು ಕಾಶಿಕಟ್ಟೆ ತನಕ ನಡೆಯಿತು. ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ಶ್ರೀದೇವರ ಗುರ್ಜಿ ಪೂಜೋತ್ಸವ ನೆರವೇರಿತು. ಕಾಶಿಕಟ್ಟೆ ಮಹಾಗಣಪತಿಗೆ ದೀಪಾರಾಧನೆಯುಕ್ತ ರಂಗಪೂಜೆ ನೆರವೇರಿತು. ಈ ಸಂದರ್ಭ ಶ್ರೀಕ್ಷೇತ್ರ ದೈವ ಹೊಸಳಿಗಮ್ಮನ ದೈವದರ್ಶನ ಮತ್ತು ನರ್ತನ ಸೇವೆ ಜರುಗಿತು.