Home ಧಾರ್ಮಿಕ ಸುದ್ದಿ ಆಕರ್ಷಕ ಬ್ರಹ್ಮ ರಥ ನಿರ್ಮಾಣ ಕಾರ್ಯಪೂರ್ಣ

ಆಕರ್ಷಕ ಬ್ರಹ್ಮ ರಥ ನಿರ್ಮಾಣ ಕಾರ್ಯಪೂರ್ಣ

ಶ್ರೀ ಕ್ಷೇತ್ರ ಕುಡುಪು

136
0
SHARE

ಮಹಾನಗರ : ನಾಗಾರಾಧನೆಯ ಮೂಲಕ್ಷೇತ್ರ, ದ. ಕ. ಜಿಲ್ಲೆಯ ಎರಡನೇ ಕುಕ್ಕೆ ಸುಬ್ರಹ್ಮಣ್ಯ ಎಂಬ ಪ್ರಸಿದ್ಧಿ ಹೊಂದಿರುವ ಕುಡುಪು ಶ್ರೀ ಅನಂತ ಪದ್ಮನಾಭ ದೇವರಿಗೆ ಆಕರ್ಷಕ ಬ್ರಹ್ಮರಥದ ನಿರ್ಮಾಣ ಕಾರ್ಯ ನಡೆದಿದೆ.

ದಕ್ಷಿಣ ಭಾರತದ ಪ್ರಮುಖ ನಾಗಾ ರಾಧನೆಯ ಕ್ಷೇತ್ರವಾದ ಕುಡುಪು ದೇಗುಲ ಸಮಗ್ರವಾಗಿ ಜೀರ್ಣೋದ್ಧಾರ ಗೊಂಡು ಕಳೆದ ವರ್ಷ ಸಂಭ್ರಮದ ಬ್ರಹ್ಮ ಕಲಶೋತ್ಸವ ನಡೆದಿತ್ತು. ಇದೀಗ ಭಕ್ತರ ಅಭಿಲಾಷೆಯಂತೆ ಬ್ರಹ್ಮರಥ ನಿರ್ಮಾಣ ಕ್ರಾರ್ಯ ಮುಕ್ತಾಯವಾಗಿದೆ. ಹಿರಿಯಡ್ಕದ ಗಣೇಶ್‌ ಆಚಾರ್ಯ ತಂಡ ಹಗಲಿರುಳು ರಥ ನಿರ್ಮಾಣ ಕೈಂಕರ್ಯದಲ್ಲಿ ಕಳೆದ ಕೆಲವು ತಿಂಗಳಿನಿಂದ ತೊಡಗಿಕೊಂಡಿದೆ.

ಶ್ರೀ ಕ್ಷೇತ್ರಕ್ಕೆ ಬ್ರಹ್ಮರಥ ನಿರ್ಮಾಣ ವಾಗಬೇಕೆಂದು ಆಡಳಿತ ಮಂಡಳಿ ಮತ್ತು ಭಕ್ತರ ಬಹುಕಾಲದ ನಿರೀಕ್ಷೆಯಾಗಿದ್ದು ಈ ಬಾರಿ ಷಷ್ಠಿ ಮಹೋತ್ಸವಕ್ಕೆ ಇದು ಸಂಪೂರ್ಣಗೊಂಡು ದೇವರ ರಥೋತ್ಸವಕ್ಕೆ ಅರ್ಪಣೆಯಾಗಲಿದೆ.

11 ಅಡಿ ಎತ್ತರ ,11 ಅಡಿ ಅಗಲ ಎರಡು ಅಚ್ಚು ಮರದ ಭಾಗಗಳ ಮೇಲೆ ರಥ ಆವೃತವಾಗಿದ್ದು ವೃತ್ತಾಕಾರದ ವ್ಯಾಸದಲ್ಲಿ 11 ಅಡಿ ಎತ್ತರ, 11 ಅಡಿ ಅಗಲವಿದೆ. ಹೆಬ್ಬಲಸು, ಸಾಗುವಾನಿ, ಬೋಗಿ ಜಾತಿಯ ಸುಮಾರು 1 ಸಾವಿರ ಸಿಎಫ್‌ಟಿ ಮರವನ್ನು ಇದಕ್ಕೆ ಬಳಕೆ ಮಾಡಲಾಗಿದೆ. ನಾಲ್ಕು ಚಕ್ರ ಭಾಗದ ಮೇಲೆ ಮೊದಲ ಭಾಗವಾಗಿ ಪ್ರಧಾನ ಅಕ್ಷದ ಮರದ ತೊಲೆಯಿದೆ. ರಥದ ಮುಂಭಾಗ ಹಾಗೂ ಹಿಂಭಾಗ ತಲಾ 6 ಮಕರ ಮುಖಗಳನ್ನು ಹೊಂದಿದೆ. ಅದರ ಮೇಲ್ಭಾಗದಲ್ಲಿ 4 ಉಪಪೀಠಗ ಳಿದ್ದು, ಇದನ್ನು ಶಿಲ್ಪಶಾಸ್ತ್ರದಲ್ಲಿ “ಬಾರೋತ್ತರ’ ಎಂಬುದಾಗಿ ಕರೆಯುತ್ತಾರೆ.

ಉಪಪೀಠವು ವಿವಿಧ ಭಾಗಗಳನ್ನು ಹೊಂದಿದ್ದು ಅವುಗಳ ಮೇಲೆ ಪೀಠ ದೇವತೆಗಳನ್ನು ಅತ್ಯಾಕರ್ಷಕವಾಗಿ ಕೆತ್ತಲಾಗಿದೆ. ಅದರ ಮೇಲೆ ಪದ್ಮದಳದ ಕೆತ್ತನೆಯು ಸುಂದರವಾಗಿದ್ದು ರಥಕ್ಕೆ ಮತ್ತಷ್ಟು ಆಕರ್ಷಣೆ ನೀಡಿದೆ. ಕೂರ್ಮ, ಗಜ, ಅಷ್ಟ ದಿಗ್ಗಜ, ಅಘನಾಶಿ ಪೀಠ ದೇವತೆಗಳನ್ನು ಇದರಲ್ಲಿ ನಾಜೂಕಾಗಿ ಕೆತ್ತಲಾಗಿದೆ. ವಿಶಿಷ್ಟ ಕಾಷ್ಠ ಶಿಲ್ಪ ಪ್ರಧಾನ ಕಂಠಭಾಗದಲ್ಲಿ ವಿಶಿಷ್ಠ ಕಾಷ್ಠಶಿಲ್ಪವಿದೆ. ಸುತ್ತ ನಾಲ್ಕು ಬದಿಗಳಲ್ಲಿ ಹದಿನಾರು ದೇವತಾ ವಿಗ್ರಹಗಳನ್ನು ಕೆತ್ತಲಾಗಿದ್ದು, ಶ್ರೀ ಮಹಾ ಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ದೇವಿ, ರುದ್ರದೇವರು, ಆದಿ ಮೂರ್ತಿ (ವೈಷ್ಣವ), ಪರ ವಾಸುದೇವ, ಗರುಡರಾಜ, ಆಂಜನೇಯ ಮೂರ್ತಿಗಳು ಕುಶಲ ಕರ್ಮಿಯ ಪ್ರೌಢಿಮೆಯನ್ನು ವ್ಯಕ್ತಪಡಿಸುತ್ತವೆ. ರಥದ ಎಂಟೂ ಭಾಗಗಳಲ್ಲೂ ಅಷ್ಟ ಕುಲನಾಗಗಳ ಉಬ್ಬು ಕೆತ್ತನೆ ಆಕರ್ಷಣೀಯವಾಗಿದೆ.

LEAVE A REPLY

Please enter your comment!
Please enter your name here