ಕುಂದಾಪುರ: ಕುಂದಾಪುರ ತಾ| ಬಿದ್ಕಲ್ಕಟ್ಟೆ – ಬಾರ್ಕೂರು ರಸ್ತೆಯ ಗಾವಳಿ ಸಮೀಪದ ಕೂಡಾಲಿನಲ್ಲಿ 1 ಕೋ.ರೂ. ವೆಚ್ಚ ದಲ್ಲಿ ಪುನಃ ನಿರ್ಮಾಣಗೊಂಡಿರುವ ಶ್ರೀ ಯಕ್ಷೆ, ವೀರಭದ್ರ, ವನದುರ್ಗಾ, ಪಂಜುರ್ಲಿ, ಕಲ್ಲುಕುಟಿಕ, ಹಾಯಿಗುಳಿ ಹಾಗೂ ನಾಗದೇವರ ನೂತನ ಶಿಲಾಮಯ ದೇಗುಲ ಸಮರ್ಪಣೆ, ಪ್ರತಿಷ್ಠಾ ಬ್ರಹ್ಮ ಕಲಶೋತ್ಸವವು ಫೆ. 4ರಿಂದ ಆರಂಭಗೊಂಡು ಫೆ. 7ರ ವರೆಗೆ ಹಾಲು ಹಬ್ಬದ ತನಕ ವೇ| ಮೂ| ಗುರುಮೂರ್ತಿ ಅಡಿಗ ಹೆದ್ದಾರಿ ಮಠ ಇವರ ಮಾರ್ಗದರ್ಶನದಲ್ಲಿ ಜರಗಲಿದೆ.
ಫೆ. 4ರಂದು ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡು ಫೆ. 5ರಂದು ಬೆಳಗ್ಗೆ 9.30ಕ್ಕೆ ನಾಗಶಿಲಾ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಪ್ರತಿಷ್ಠಾ ಹೋಮ, ಸಪರಿವಾರ ಯಕ್ಷೆ ಪ್ರತಿಷ್ಠಾ ವಿಧಿ ಮಹಾಪೂಜೆ ನಡೆಯಲಿದೆ. ಫೆ.6ರಂದು ಬೆಳಗ್ಗೆ 8 ಗಂಟೆಯಿಂದ ವಿಶೇಷ ಬ್ರಹ್ಮಕಲಶ ಸ್ಥಾಪನೆ, ತತ್ವಹೋಮ, ಕಲಾಹೋಮ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ 11.30ಕ್ಕೆ ಧಾರ್ಮಿಕ ಸಭೆಯು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಕೊಲ್ಲೂರು ಶ್ರೀ ಮೂಕಾಂಬಿಕೆ ದೇಗುಲದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಧರ್ಮದರ್ಶಿ ಎನ್. ಮಂಜಯ್ಯ ಶೆಟ್ಟಿ, ಕಾಳಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎನ್. ರವಿರಾಜ ಶೆಟ್ಟಿ, ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮರಾತೂರು ಸುರೇಶ ಶೆಟ್ಟಿ, ಗಾವಳಿ ಓಂ ಸಾಯಿ ನಿವಾಸಿ ನಾರಾಯಣ ಆರ್. ಶೆಟ್ಟಿ ಹಾಗೂ ಕೂಡಾಲು ನಡುಮನೆ ಕೆ. ಸಂತೋಷ ಶೆಟ್ಟಿ ಅವರಿಗೆ ಸಮ್ಮಾನ ನಡೆಯಲಿದೆ.
ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ರಾತ್ರಿ 7ರಿಂದ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ರಾತ್ರಿ 11ಕ್ಕೆ ಗೆಂಡ ಸೇವೆ ಅನಂತರ ಅನ್ನಸಂತರ್ಪಣೆ ನಡೆಯಲಿದೆ. ಫೆ. 7ರಂದು ಬೆಳಗ್ಗೆ ಹಾಲುಹಬ್ಬ, ತುಲಾಭಾರ, ಬಲಿಸೇವೆ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.