Home ನಂಬಿಕೆ ಸುತ್ತಮುತ್ತ ಕೃಷ್ಣನೆಂದರೆ ಬದುಕಿನ ಶಕ್ತಿ.. ಬದುಕಿನ ಮಾರ್ಗ.. “ಕೃಷ್ಣಂ ವಂದೇ ಜಗದ್ಗುರುಂ” ಕೃಷ್ಣನೆಂದರೆ ಯಾರು?

ಕೃಷ್ಣನೆಂದರೆ ಬದುಕಿನ ಶಕ್ತಿ.. ಬದುಕಿನ ಮಾರ್ಗ.. “ಕೃಷ್ಣಂ ವಂದೇ ಜಗದ್ಗುರುಂ” ಕೃಷ್ಣನೆಂದರೆ ಯಾರು?

5319
0
SHARE

ಕೃಷ್ಣನೆಂದರೆ ಏನೆಂಬುದನ್ನು ನಾವು ತಿಳಿದಿದ್ದಿಷ್ಟು; ಆತ ದ್ವಾಪರಯುಗದ ಅವತಾರಪುರುಷ, ವಸುದೇವ ದೇವಕಿಯರ ಪುತ್ರ, ನಂದಗೋಕುಲದಲ್ಲಿ ಯಶೋದೆಯ ಅಂಗೈಯಲ್ಲಿ ಬೆಳೆದ ಹುಡುಗ, ಆತನ ತುಂಟಾಟ, ಬೆಣ್ಣೆಯ ಮೇಲಿನ ಪ್ರೀತಿ, ಕಾಳಿಂಗನನ್ನು ಸಂಹರಿಸಿದ್ದು, ಗೋವರ್ಧನ ಗಿರಿ ಎತ್ತಿದ್ದು, ಪಾಂಡವರ ಸಾರಥ್ಯವಹಿಸಿದ್ದು, ಧರ್ಮವನ್ನು ಉಳಿಸಿದ್ದು  ಬೋಧಿಸಿದ್ದು ಹೀಗೆ ಹಲವು ಸಂಗತಿಗಳು ನಮಗೆ ಗೊತ್ತು. ಕೃಷ್ಣನೆಂಬವನು ದೇವರದೇವ.

ಇವೆಲ್ಲವೂ ನಮ್ಮ ಹೊರಗಣ್ಣಿಗೆ, ನಮ್ಮ ಓದಿಗೆ, ಕೇಳುವಿಕೆಗೆ ನಿಲುಕಿದ್ದು; ಅರಿತದ್ದು. ನಿಜವಾಗಿಯೂ ಕೃಷ್ಣನೆಂದರೆ ಯಾರು? ಕೃಷ್ಣನೆಂದರೆ ಆತ್ಮದ ಸ್ವರೂಪ. ಪರಮಾತ್ಮನು ಜೀವಾತ್ಮನಾಗಿ ಬದುಕನ್ನು ಸವೆಸುವ ಬಗೆಯನ್ನು ತಿಳಿಸಿದ ಮೂರ್ತಿ. ಕೃಷ್ಣನೆಂದರೆ ಜೀವನದ ರೀತಿ ನೀತಿ. ಬದುಕುವ ಸರಳಮಾರ್ಗ. ಕೃಷ್ಣನ ಬಾಲ್ಯದಿಂದ ಹಿಡಿದು ಪರಂಧಾಮದ ತನಕವೂ ನಾವು ಕಲಿತು ಅಳವಡಿಸಿಕೊಳ್ಳಬೇಕಾದುದು ಬಹಳಷ್ಟಿದೆ.

ಮಗುವಾಗಿದ್ದ ಕೃಷ್ಣನ ತುಂಟಾಟಗಳನ್ನು ನಮ್ಮ ಮಗುವಿಗೆ ಹೋಲಿಸಿಕೊಂಡು ಆನಂದ ಪಡುವ ಅಪ್ಪ ಅಮ್ಮಂದಿರು ಇವತ್ತಿಗೂ ಇದ್ದಾರೆ. ಆದರೆ ಅದೇ ಕೃಷ್ಣ ಹೇಗೆ ಬದುಕಿದ? ಆತ ತೋರಿದ ಬದುಕಿನ ಬಗೆಗಳಾವುವು? ಎನ್ನುವುದನ್ನು ನಾವು ಅರಿಯುವುದೂ ಇಲ್ಲ; ಪಾಲಿಸುವುದೂ ಇಲ್ಲ. ಹುಟ್ಟುತ್ತಲೇ ತಂದೆತಾಯಿಯರಿಂದ ದೂರಾದ ಕೃಷ್ಣನ ಬದುಕು ತಾವು ತನ್ನವರೆಂಬ ಅತಿಯಾದ ಮೋಹದಿಂದ ದೂರವಿರಬೇಕೆಂಬುದನ್ನು ಸೂಚಿಸುತ್ತದೆ. ನಂದಗೋಕುಲದಲ್ಲಿ ಬೆಳೆದು ಎಲ್ಲರ ಪ್ರೀತಿಗೆ ಪಾತ್ರವಾಗುವ ಕೃಷ್ಣ ನಾವು ಹೊರಜಗತ್ತನ್ನು ಹೇಗೆ ಪ್ರೀತಿಸಬೇಕೆಂಬುದನ್ನು ತೋರಿಸುತ್ತಾನೆ. ಎಳವೆಯಲ್ಲಿಯೇ ಸ್ವಂತ ಮಾವನೇ ಆಗಿದ್ದರೂ ಕಂಸನನ್ನು ಕೊಂದು ದುಷ್ಟತನವನ್ನು ನಾಶಮಾಡುವ ಬುದ್ಧಿ ಚಿಕ್ಕಂದಿನಿಂದಲೇ ಬೆಳೆಯಬೇಕೆಂಬುದನ್ನು ತೋರಿಸುತ್ತಾನೆ, ಹಸುಗಳನ್ನು ಪ್ರೀತಿಸುತ್ತಾ ಪ್ರಾಣಿಪ್ರೀತಿಯನ್ನು, ತುಳಸಿಪ್ರಿಯನಾದ ಈತ ಪರಿಸರಪ್ರೇಮವನ್ನು ಬೆಳೆಸಿಕೊಳ್ಳುವುದಕ್ಕೆ ಪ್ರೇರಣೆಯಾಗುತ್ತಾನೆ. ಇನ್ನು ಅವನ ಕೈಯಲ್ಲಿನ ಕೊಳಲೂ ಜೀವನದ ಏರಿಳಿತವನ್ನು ಬಿಂಬಿಸುತ್ತವೆ. ಕೊಳಲಿನ ರಂಧ್ರಗಳ ಮೇಲೆ ಬೆರಳಾಡಿಸುತ್ತ ನಾದ ಹೊರಡಿಸಿದರೆ ಆ ಮಾಧುರ್ಯಕ್ಕೆ ಮಾರುಹೋಗದವರಿಲ್ಲ. ಅದೊಂದು ಏಕಾಗ್ರತೆಯ ಸಾಧನವೂ ಹೌದು. ಒಂದೆಡೆ ದ್ರೌಪದಿಯ ಮಾನ ಕಾಪಾಡಿ ಹೆಣ್ಣಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂಬುದನ್ನು ಸೂಚಿಸುತ್ತಾನೆ. ಕುಚೇಲನಂತಹ ಬಡಮಿತ್ರನನ್ನು ತನ್ನ ಅರಮನೆಯಲ್ಲಿ ಪ್ರೀತಿಯಿಂದ ಗೌರವಿಸುತ್ತಾನೆ. ವಿದುರನಂತಹ ಸಾಮಾನ್ಯನ ಮನೆಯಲ್ಲಿ ಉಳಿದುಕೊಂಡು ಜಗತ್ತಿನಲ್ಲಿ ಎಲ್ಲರಲ್ಲೂ ಸಮಾನಭಾವವಿರಬೇಕೆಂಬುದನ್ನು ಸಾರುತ್ತಾನೆ. ನಾವು ಸಾಮಾನ್ಯನಾಗಿ ಬಾಳುವುದನ್ನು ಈತನನ್ನು ನೋಡಿ ಕಲಿಯಬೇಕಿದೆ.

ಇಂದು ನಾವು ಕೃಷ್ಣನನ್ನು ಅರಿಯುವ ಅಗತ್ಯವಿದೆ. ಸರಳವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಎರಡು ಕರಜೋಡಿಸಿ ಕೃಷ್ಣನಿಗೆ ವಂದಿಸುವಾಗ ಆತನ ನಡೆಯನ್ನು ಪಾಲಿಸುತ್ತೇನೆಂದು ನಿರ್ಧರಿಸುವ ಅಗತ್ಯವಿದೆ. ಧರ್ಮದಿಂದ ಬದುಕುವ ಪ್ರತಿಜ್ಞೆ ಮಾಡುವ ಅಗತ್ಯವಿದೆ. ಹಾಗಾಗಿ ಕೃಷ್ಣನೆಂದರೆ ಬದುಕಿನ ಶಕ್ತಿ; ಬದುಕಿನ ಮಾರ್ಗ. ಅದಕ್ಕೆ ಆತನನ್ನು “ಕೃಷ್ಣಂ ವಂದೇ ಜಗದ್ಗುರುಂ” ಎನ್ನಲಾಗಿದೆ. ನರನಾಗಿ ದೇವರು ಬುವಿಗೆ ಬಂದು, ಜೀವಿಸಿ ಮಾನವನಿಗೆ ಬದುಕಿನ ದಾರಿ ತೋರಿದ ರೂಪವೇ ಕೃಷ್ಣ. ಕೇವಲ ಕೃಷ್ಣ ಕೃಷ್ಣ ಎನ್ನುತ್ತ ಜಪಿಸಿದರೆ ಸಾಲದು. ಆತ ತೋರಿದ ಧರ್ಮದ ನಡೆಯನ್ನು ತಪ್ಪದೆ ಪಾಲಿಸಬೇಕಾದುದು ಅತ್ಯಗತ್ಯ.

ಕೃಷ್ಣನೆಂದರೆ ದೇವರು ಬದುಕುವ ರೀತಿ. ಮಾನವನು ದೇವರಾಗಲು ಇರುವ ಮಾರ್ಗದರ್ಶಕ ಪಾತ್ರ ಸೂತ್ರ ಎಲ್ಲ. ಇನ್ನಾದರೂ ಹರಿ ತೋರಿದ ದಾರಿಯಲ್ಲಿ ಎಲ್ಲರೂ ಸಾಗುವಂತಾಗಲಿ ಎಂಬುದು ಪ್ರಾರ್ಥನೆ.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||
ವಿಷ್ಣು ಭಟ್ಟ ಹೊಸ್ಮನೆ.

LEAVE A REPLY

Please enter your comment!
Please enter your name here