ಕೋಟೇಶ್ವರ: ಜಿಲ್ಲೆಯಲ್ಲೇ ಕೊಡಿ ಹಬ್ಬವೆಂದು ಹೆಸರು ಗಳಿಸಿರುವ ಇಲ್ಲಿನ ಜಾತ್ರೆಯಲ್ಲಿ ಕೊಡಿ ತಿಂಗಳ ಹುಣ್ಣಿಮೆಯ ದಿನ ರಥೋತ್ಸವ ನಡೆಯು ವುದು ವಿಶೇಷವಾಗಿದೆ. 14 ಅಸುಪಾಸಿನ ಗ್ರಾಮಗಳ ಭಕ್ತರು ಕೊಡಿ ಹಬ್ಬದಂದು ತೇರು ಎಳೆಯಲು ಇಲ್ಲಿಗೆ ಆಗಮಿಸುವ ಪರಂಪರೆ ಆನಾದಿಕಾಲದಿಂದಲೂ ನಡೆದು ಬಂದಿದೆ. ಕೊಡಿ ಹಬ್ಬದಂದು ಸಪ್ತ ಮಾತೃಕೆ ಯರು, ಸುಬ್ರಹ್ಮಣ್ಯ, ಜ್ಯೇಷ್ಠ ಲಕ್ಷ್ಮೀ, ಮಹಿಷಮರ್ದಿನಿ, ವೆಂಕಟರಮಣ, ನಂದಿ, ಪಾರ್ವತಿ ದೇವಿ, ತಾಂಡವೇಶ್ವರ ಈ ದೇವರಿಗೆ ವಿಶೇಷ ಪೂಜೆ ನಡೆಯು ತ್ತದೆ. ಶಂಕರಾಚಾರ್ಯರ ಪ್ರತಿಮೆ ಪ್ರತಿಷ್ಠಾಪನೆಗೊಂಡಿದ್ದು ಆದಿ ಗಣಪತಿ, ಶ್ರೀ ಮುಖ್ಯಪ್ರಾಣ, ಮಹಾವಿಷ್ಣು, ಗೋಪಾಲಕೃಷ್ಣ ಗುಡಿಯು ಭಕ್ತರ ದೈನಂದಿನ ಪ್ರಾರ್ಥನ ಕೇಂದ್ರವಾಗಿದೆ.
ವಿಶೇಷ ತಟ್ಟಿರಾಯ
ಇಲ್ಲಿನ 2 ತಟ್ಟಿರಾಯಗಳು ಜಿಲ್ಲೆಯಲ್ಲಿ ಹೆಸರುವಾಸಿಯಾಗಿವೆ. ಇವುಗಳನ್ನು ಗಜಕರ್ಣ, ಘಂಟಾಕರ್ಣ ಎಂದು ಕರೆಯ ಲಾಗುತ್ತಿದೆ. ಕೊಡಿ ಹಬ್ಬದ ರಥೋತ್ಸವ ಸಹಿತ ದೇಗುಲದ ವಿಶೇಷ ಕಾರ್ಯಕ್ರಮಗಳಲ್ಲಿ ತಟ್ಟಿರಾಯನ ಪಾತ್ರ ಮಹತ್ವವಾದುದು.
ಕೋಟೇಶ್ವರ ಪೇಟೆ ಜಗಮಗ
ಕೋಟಿಲಿಂಗೇಶ್ವರ ದೇಗುಲ ಸಹಿತ ತೆಂಕು ಪೇಟೆ ಹಾಗೂ ಬಡಗು ಪೇಟೆಯ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ದೀಪಾಲಂಕಾರಗೊಳಿಸಲಾಗಿದ್ದು ಅಂಗಡಿ ಮುಂಗಟ್ಟುಗಳನ್ನು ವಿಶೇಷ ದೀಪಗಳಿಂದ ಅಲಂಕರಿಸಲಾಗಿದೆ. ಕೊಡಿ ಹಬ್ಬದ ವೈಭವಕ್ಕೆ ಅಲಂಕೃತಗೊಂಡ ಪೇಟೆಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇಗುಲದ ಕಟ್ಟುಪಾಡು ಗಳನ್ನು ಮೆಲುಕು ಹಾಕುವಂತಿದೆ.
ಮರೆಯಾಗುತ್ತಿದೆ ಪರಂಪರೆಯ ಕಟ್ಟುಪಾಡು
ಆನಾದಿ ಕಾಲದಿಂದಲೂ ಕೊಡಿ ಹಬ್ಬದ ಸಂದರ್ಭದಲ್ಲಿ ಇಲ್ಲಿನ ಜೋಗಿ ಸಮಾಜದ ಪ್ರಮುಖರು ಪಾರಂಪರಿಕವಾಗಿ ಮನೆ ಮನೆಗೆ ಅವರು ಆರಾ ಧಿಸುವ ದೇವರನ್ನು ಮುಂಡಾಸಿನ ನಡುವೆ ತಲೆಯಲ್ಲಿ ಹೊತ್ತುಕೊಂಡು ಪ್ರಸಾದವನ್ನು ಕೊಟ್ಟು ಕೊಡಿ ಹಬ್ಬಕ್ಕೆ ಆಮಂತ್ರಿಸುವ ಪದ್ಧªತಿ ಇತ್ತು. ಮನೆಯವರು ಅಕ್ಕಿ, ಧವಸ ಧಾನ್ಯ, ತೆಂಗಿನಕಾಯಿ ಕೊಟ್ಟು ಅವರನ್ನು ಗೌರವಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಪದ್ಧತಿ ಕಡಿಮೆಯಾಗುತ್ತಿದೆ. ಇಂತಹ ಧಾರ್ಮಿಕ ಪರಂಪರೆಯನ್ನು ಮುಂದುವರಿಸಿದಲ್ಲಿ ಅದಕ್ಕೊಂದು ಹೊಸ ಚೈತನ್ಯ ತುಂಬಿದಂತಾಗುವುದು.
ವಾಹನ ನಿಲುಗಡೆಗೆ ಆಯ್ದ ಪ್ರದೇಶಗಳ ನಿಗದಿ
ಕೋಟೇಶ್ವರ: ಕೊಡಿಹಬ್ಬದ ಪ್ರಯುಕ್ತ ಜಾತ್ರೆಗೆ ಬರುವ ಭಕ್ತರಿಗೆ ಸುಗಮ ಸಂಚಾರಕ್ಕಾಗಿ ಆಯ್ದ ಕಡೆಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆಗೊಳಿಸಲಾಗಿದೆ. ಹಾಲಾಡಿ ಕಡೆಯಿಂದ ಬರುವ ವಾಹನಗಳಿಗೆ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜು ಮೈದಾನ, ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಗೇರಿ ಸೇತುವೆಯ ಹತ್ತಿರ ಹಾಗೂ ಅಂಶು ಡೆವಲಪರ್ಸ್ ಎದುರು ನಿಗದಿಪಡಿಸಲಾಗಿದೆ. ಉಡುಪಿ ಕಡೆಯಿಂದ ಬರುವ ವಾಹನ ಗಳಿಗೆ ಕಮಲಮ್ಮ ಕಲ್ಯಾಣ ಮಂಟಪದ ಬಳಿ, ಪದವಿಪೂರ್ವ ಕಾಲೇಜು ಹಿಂಭಾಗ, ರುದ್ರಭೂಮಿ ಬಳಿ ಇರುವ ರಾ.ಹೆದ್ದಾರಿಯ 2 ಬದಿ, ಕುಂದಾಪುರ ಕಡೆಯಿಂದ ಬರುವ ವಾಹನಗಳಿಗೆ ಅಂಕದಕಟ್ಟೆಯ ಸಹನಾ ಗ್ರೂಪ್ ಆಫ್ ಹೊಟೇಲ್ನ ಖಾಲಿ ಜಾಗ ಹಾಗೂ ಆರ್ಯ ಹೊಟೇಲ್ ಪಕ್ಕದಲ್ಲಿ ವ್ಯವಸ್ಥೆಗೊಳಿಸಲಾಗಿದೆ ಎಂದು ಕೋಟೇಶ್ವರ ಗ್ರಾ.ಪಂ. ಪ್ರಕಟನೆ ತಿಳಿಸಿದೆ.
-ಡಾ| ಸುಧಾಕರ ನಂಬಿಯಾರ್