ಕೋಟ: ನಮ್ಮ ಸಮಾಜದಲ್ಲಿ ಗುರುಪೀಠಕ್ಕೆ ಅತ್ಯಂತ ಮಹತ್ವವಿದೆ. ನಮಗೆ ಮಾರ್ಗದರ್ಶನ ನೀಡಿದ ಗುರುವರ್ಯರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ದೇವರ ನಿಜ ದರ್ಶನ ಗುರುಗಳ ಮೂಲಕ ಸಾಧ್ಯ ಎಂದು ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಕೋಟ ಶ್ರೀಕಾಶೀ ಮಠದ ಮುರಲೀಧರ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ನಡೆದ ಸುಕೃತೀಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಗುರುಗುಣಗಾನ ಮಾಡಿ ಆಶೀರ್ವದಿಸಿದರು.
ನಮ್ಮ ಹಿರಿಯರು ಅತ್ಯಂತ ಕಷ್ಟ ಕಾಲದಲ್ಲಿ ಗುರುಪರಂಪರೆಯನ್ನು ಉಳಿಸಿಕೊಂಡು ಬಂದಿರುತ್ತಾರೆ. ಇಂತಹ ಭವ್ಯ ಇತಿಹಾಸದ ಕುರಿತು ಸಮಾಜದ ಸರ್ವರಿಗೂ ತಿಳಿಹೇಳಬೇಕು ಹಾಗೂ ಇಂದಿನ ಕಾಲಘಟ್ಟದಲ್ಲಿ ಇದನ್ನು ಮುನ್ನಡೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಈ ಸಂದರ್ಭ ಯುವಕ ಸಮಾಜದವರಿಂದ ಗುರುವರ್ಯರಿಗೆ ಪಾದಪೂಜೆ ನಡೆಯಿತು. ವೇವವ್ಯಾಸ ದೇವರಿಗೆ ಲಘು ವಿಷ್ಣು ಅಭಿಷೇಕ, ಪಾದೂಕಾ ಪೂಜೆ, ಸ್ವರ್ಣ ಗರುಡ ವಾಹನ ಪೂಜೆ ನೆರವೇರಿತು.
ವೇ.ಮೂ. ದೇವದತ್ತ ಭಟ್, ವೇ.ಮೂ. ಸುಧಾಕರ ಭಟ್ ಹಾಗೂ ವೇ.ಮೂ. ಶ್ರೀಕಾಂತ್ ಭಟ್ ಸುಕೃತೀಂದ್ರ ತೀರ್ಥರ ಮಹತ್ವವನ್ನು ದೃಷ್ಟಾಂತದ ಮೂಲಕ ತಿಳಿಸಿದರು.
ಚಾತುರ್ಮಾಸ್ಯ ಸಮಿತಿಯ ಗೌರವಾಧ್ಯಕ್ಷ ರಮೇಶ ಪಡಿಯಾರ್, ಅಧ್ಯಕ್ಷರಾದ ರಾಧಾಕೃಷ್ಣ ನಾಯಕ್, ದೇವಳದ ಅರ್ಚಕರಾದ ಕಪಿಲದಾಸ ಭಟ್, ಅರವಿಂದ ಭಟ್, ಕಾರ್ಯದರ್ಶಿ ವೇದವ್ಯಾಸ ಪೈ, ಯುವಕ ಸಮಾಜದ ಪದಾಧಿಕಾರಿಗಳು, ಊರ ಪರವೂರ ಸಮಾಜ ಭಾಂಧವರು ಉಪಸ್ಥಿತರಿದ್ದರು.