ಕೋಟ: ಕೋಟ ಶ್ರೀ ಕಾಶೀ ಮಠ ಶ್ರೀ ಮುರಳೀಧರ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿಯವರು ಕೈಗೊಂಡ ಚಾತುರ್ಮಾಸ ವ್ರತಾಚರಣೆ ಯಶಸ್ವಿಯಾಗಿ ಸಂಪನ್ನ ಗೊಂಡ ಪ್ರಯುಕ್ತ ದಿಗ್ವಿಜಯ ಮಹೋತ್ಸವವು ಶನಿವಾರ ರಾತ್ರಿ ಸಾವಿರಾರು ಮಂದಿ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಅದ್ದೂರಿಯಾಗಿ ಜರಗಿತು.
ಈ ಸಂದರ್ಭ ಶ್ರೀ ವ್ಯಾಸರಘುಪತಿ ನರಸಿಂಹ ದೇವರಿಗೆ ವಿಶೇಷ ಪವಮಾನ ಅಭಿಷೇಕ, ಮಹಾಪೂಜೆ, ಮಹಾ ಸಮಾ ರಾಧನೆ ನಡೆಯಿತು. ರಾತ್ರಿ ದಿಗ್ವಿಜಯಕ್ಕೆ ಮುನ್ನ ಸ್ವಾಮಿಗಳು ಇಷ್ಟ ದೇವರಿಗೆ ಪೂಜೆ ಸಲ್ಲಿಸಿದರು. ಪುರ ಮೆರವಣಿಗೆಗಾಗಿ ಅವರು ತೆರೆದ ವಾಹನದಲ್ಲಿ ಆಸೀನರಾದಾಗ ಊರ-ಪರವೂರ ದೇಗುಲ ಮತ್ತು ಸಮಾಜ ಮಠ ಮಂದಿರದ ಪ್ರಮುಖರು ಮಾಲಾರ್ಪಣೆ ಮಾಡಿದರು. ಶ್ರೀಗಳು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಭಕ್ತಿ ಪರವಶ
ಕೋಟವಿಡೀ ಧಾರ್ಮಿಕ ವಾತಾವರಣ ಕಳೆಗಟ್ಟಿತ್ತು. ರಾತ್ರಿ ಸ್ವಾಮೀಜಿಯವರು ದಿಗ್ವಿಜಯಕ್ಕಾಗಿ ಆಗಮಿಸುತ್ತಿದ್ದಂತೆ ಭಕ್ತಾದಿಗಳು ಜಯಘೋಷ ಕೂಗಿದರು ಮತ್ತು ಸರತಿಯ ಸಾಲಿನಲ್ಲಿ ನಿಂತು ಪ್ರಣಾಮ ಸಲ್ಲಿಸಿದರು. ಹಲವು ಕಡೆಗಳಲ್ಲಿ ಮನೋರಂಜನೆಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಶೀಮಠ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ. ರಮೇಶ್ ಪಡಿಯಾರ್, ಜಿಎಸ್ಬಿ ಸೇವಾ ಸಂಘದ ಅಧ್ಯಕ್ಷ ನರಸಿಂಹ ಪ್ರಭು ಕೋಟ, ಪ್ರಧಾನ ಅರ್ಚಕ ವೇ|ಮೂ| ಕಪಿಲದಾಸ್ ಭಟ್, ಚಾತುರ್ಮಾಸ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯಕ್, ಗೌರವಾಧ್ಯಕ್ಷ ಯು. ದಾಮೋದರ ಶೆಣೈ ಕುಂದಾಪುರ, ವೆಂಕಟೇಶ್ ಪ್ರಭು ಬೆಂಗಳೂರು, ಕಾರ್ಯದರ್ಶಿ ವೇದವ್ಯಾಸ ಪೈ, ಶಾಸಕ ವೇದವ್ಯಾಸ ಕಾಮತ್, ಯುವಕ ಸಮಾಜದ ಅಧ್ಯಕ್ಷ ಚಂದ್ರಕಾಂತ್ ಪೈ, ಕಾರ್ಯದರ್ಶಿ ಅರವಿಂದ ಭಟ್ ಮತ್ತು ದೇಗುಲ ಹಾಗೂ ಸಮಾಜ ಮಠ ಮಂದಿರದ ಪ್ರಮುಖರು, ಸಾವಿ ರಾರು ಭಕ್ತರು ಉಪಸ್ಥಿತರಿದ್ದರು.
ಅದ್ದೂರಿ ಪುರ ಮೆರವಣಿಗೆ
ಸ್ವಾಮೀಜಿಯವರನ್ನು ತೆರೆದ ಪುಷ್ಪಾಲಂಕೃತ ವಾಹನದಲ್ಲಿ ಕುಳ್ಳಿರಿಸಿ ಕೋಟದಿಂದ ಮಣೂರು- ಕರಿಕಲ್ಕಟ್ಟೆ ಮತ್ತು ಅಲ್ಲಿಂದ ಕೋಟ ಹೈಸ್ಕೂಲ್ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಅದ್ದೂರಿ ಪುರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ಸಾಗುವ ಹಾದಿಯಲ್ಲಿ ಜಿಎಸ್ಬಿ ಸಮಾಜಸ್ಥರ ಮನೆಗಳನ್ನು ಅಲಂಕರಿಸಲಾಗಿತ್ತು. ಹಲವು ಕಡೆಗಳಲ್ಲಿ ಭಕ್ತರಿಗೆ ಮಂತ್ರಾಕ್ಷತೆ ನೀಡಲಾಯಿತು. ಹತ್ತಕ್ಕೂ ಹೆಚ್ಚು ಟ್ಯಾಬ್ಲೋಗಳು ಮೆರವಣಿಗೆಯ ವೈಶಿಷ್ಟ್ಯವಾಗಿದ್ದವು.