Home ಧಾರ್ಮಿಕ ಸುದ್ದಿ ಗರಿಕೇಮಠ ಶ್ರೀನಿವಾಸ ಕಲ್ಯಾಣೋತ್ಸವ

ಗರಿಕೇಮಠ ಶ್ರೀನಿವಾಸ ಕಲ್ಯಾಣೋತ್ಸವ

1364
0
SHARE

ವೈಕುಂಠವೇ ಧರೆಗಿಳಿದಂತೆ ಭಕ್ತಿಪರವಶರಾದ ಭಕ್ತವರ್ಗ; ಗೋವಿಂದ -ಗೋವಿಂದ ನಾಮ ಸಂಕೀರ್ತನೆಯೊಂದಿಗೆ ಶ್ರೀನಿವಾಸ-ಪದ್ಮಾವತಿ ಕಲ್ಯಾಣ

ಕೋಟ: ಸಾೖಬ್ರಕಟ್ಟೆ ಸಮೀಪದ ಗರಿಕೇಮಠ ಅರ್ಕ ಗಣಪತಿ ಶ್ರೀಕ್ಷೇತ್ರದಲ್ಲಿ ಮಂಗಳವಾರ ಹಲವಾರು ವೈಶಿಷ್ಟ್ಯಗಳೊಂದಿಗೆ ಅದ್ಧೂರಿ ಶ್ರೀನಿವಾಸ ಕಲ್ಯಾಣೋತ್ಸವ ಜರಗಿತು.

ಉಡುಪಿ ಜಿಲ್ಲೆಯ ಇತಿಹಾಸದಲ್ಲೇ ಅಪರೂಪ  ಎಂಬಂತೆ ನೇರವಾಗಿ ತಿರುಮಲ ತಿರುಪತಿ ದೇವಸ್ಥಾನ (ಟಿ.ಟಿ.ಡಿ.) ಧಾರ್ಮಿಕ ಉಸ್ತುವಾರಿಯಲ್ಲಿ ಕಲ್ಯಾಣೋತ್ಸವದ ಧಾರ್ಮಿಕ ಕಾರ್ಯಕ್ರಮ ನೆರವೇರಿದ್ದು ವಿಶೇಷವಾಗಿತ್ತು.

ಉತ್ಸವ ಮೂರ್ತಿ ಹಾಗೂ ಪೂಜಾ ಪರಿಕರಗಳು ಪೌರೋಹಿತ್ಯ ಸೇರಿದಂತೆ ಎಲ್ಲ ಧಾರ್ಮಿಕ ವಿಧಿ ವಿಧಾನಗಳು ತಿರುಪತಿ ತಿರುಮಲ ದೇವಸ್ಥಾನದಿಂದಲೇ ನೆರವೇರಿತು.ಹಾಗೂ ಕಾರ್ಯಕ್ರಮದ ಪ್ರಯುಕ್ತ ವಿಶೇಷ ಪುಷ್ಪಾಲಂಕಾರ, ಕಿಲೋ ಮೀಟರ್‌ ಗಟ್ಟಲೆ ಬಂಟಿಂಗ್ಸ್‌, ವಿದ್ಯುತ್‌ ದೀಪಾಲಂಕಾರ ಗಮನಸೆಳೆಯಿತು. ಒಟ್ಟಾರೆ ಗರೀಕೆಮಠ ಪ್ರದೇಶದಲ್ಲಿ ಹಬ್ಬದ ವಾತಾವರಣ ಕಲೆ ಗಟ್ಟಿತ್ತು.

ಕಾರ್ಯಕ್ರಮದ ಅನಂತರ ದೇವರ ದರ್ಶನ ಹಾಗೂ ಪ್ರಸಾದ ವಿತರಣೆಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ನೂರಾರು ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗೆ ಸಾಕಷ್ಟು ಶ್ರಮಿಸಿದರು.

ಸ್ವತ್ಛತೆಯನ್ನೂ ಕಾಪಾಡಿಕೊಂಡು ಬಂದಿದ್ದರು.ಈ ಸಂದರ್ಭ ಉಪಸ್ಥಿತರಿದ್ದ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ತೀರ್ಥ ಶ್ರೀಪಾದಂಗಳವರು ಭಕ್ತಾದಿಗಳನ್ನು ಆಶೀರ್ವದಿಸಿದರು.ಕಾರ್ಯಕ್ರಮದ ಸಂಘಟಕ ಗರೀಕೆಮಠ ಕ್ಷೇತ್ರದ ಮುಖ್ಯಸ್ಥ ಜಿ.ರಾಮಪ್ರಸಾದ್‌ ಭಾಗವಹಿಸಿದ್ದರು.

ನಾಮಸಂಕೀರ್ತನೆ
ಸಂಜೆ ನಡೆದ ಕಲ್ಯಾಣೋತ್ಸವದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಅಷ್ಟೂ ಮಂದಿ ಭಕ್ತಾದಿಗಳು ಆರಾಮವಾಗಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ವಿಶಾಲವಾದ ಚಪ್ಪರ ವ್ಯವಸ್ಥೆ ಮಾಡಲಾಗಿತ್ತು. ಕಲ್ಯಾಣೋತ್ಸವ ಆರಂಭವಾಗುತ್ತಿದ್ದಂತೆ ಭಕ್ತಾಧಿಗಳು ವೆಂಕಟೇಶ್ವರನ ನಾಮ ಸಂಕೀರ್ತನೆಯಲ್ಲಿ ತೊಡಗಿದರು ಹಾಗೂ ಮಾಂಗಲ್ಯಧಾರಣೆ, ಧಾರೆ ಎರೆಯುವುದು ಮುಂತಾದ ಶಾಸ್ತ್ರದ ಸಂದರ್ಭ ಗೋವಿಂದ-ಗೋವಿಂದ ಸಂಕೀರ್ತನೆ ಮುಗಿಲು ಮುಟ್ಟಿತು ಹಾಗೂ ಭಕ್ತಾದಿಗಳು ವೈಕುಂಠವೇ ಧರೆಗಿಳಿದಂತೆ ಭಾವಪರವಶರಾದರು.

LEAVE A REPLY

Please enter your comment!
Please enter your name here