ಕೋಟ: ಕೋಟ ಅಮೃತೇಶ್ವರೀ ದೇಗುಲದಲ್ಲಿ ಮಾ.20 ರಂದು ಕೋವಿಡ್ 19 ವೈರಸ್ ವಿರುದ್ಧ ಜನಜಾಗೃತಿ ಕಾರ್ಯಕ್ರಮ ಜರಗಿತು.
ಈ ಸಂದರ್ಭ ದೇಗುಲಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು. ಮಾಸ್ಕ್ ವಿತರಿಸಿ ಮಾತಾನಾಡಿದ ಬ್ರಹ್ಮಾವರ ತಹಶೀಲ್ದಾರ್ ಹಾಗೂ ದೇಗುಲದ ಆಡಳಿತಾಧಿಕಾರಿ ಕಿರಣ್ ಗೋರಯ್ಯ ಬ್ರಹ್ಮಾವರ ತಾಲೂಕಿನಲ್ಲಿ ಇದುವರೆಗೆ ಕೋವಿಡ್ 19 ಪ್ರಕರಣ ಪ್ತತೆಯಾಗಿಲ್ಲ. ಆದರೆ ಹೊರ ಜಿಲ್ಲೆ, ರಾಜ್ಯ, ವಿದೇಶದಿಂದ ಆಗಮಿಸಿದವರಿಂದ ಈ ರೋಗ ಹರಡುವ ಸಾಧ್ಯತೆ ಇದೆ. ಆದ್ದರಿಂದ ದೇವಸ್ಥಾನ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ತೆರಳುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಉತ್ತಮ. ಗ್ರಾಮಾಂತರ ಭಾಗದ ಜನರಿಗೆ ಈ ಕುರಿತು ತಿಳುವಳಿಕೆಯ ಕೊರತೆ ಇರುತ್ತದೆ. ಆದ್ದರಿಂದ ದೇಗುಲದ ವತಿಯಿಂದ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ದೇಗುಲದ ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಅಧ್ಯಕ್ಷ ಆನಂದ ಸಿ.ಕುಂದರ್ ಮಾತನಾಡಿ, ಯಾವುದೇ ಖಾಯಿಲೆಯಾದರು ಮುನ್ನೆಚ್ಚರಿಕೆ ವಹಿಸುವುದರಿಂದ ಅದು ಹರಡುವುದನ್ನು ತಪ್ಪಿಸಬಹುದು. ಅದೇ ರೀತಿ ಕೋವಿಡ್ 19 ವಿರುದ್ಧ ಕೂಡ ಸೂಕ್ತ ಮುಂಜಾಗೃತೆ ಅಗತ್ಯವಿದೆ ಎಂದರು.
ಕಾರ್ಯನಿರ್ವಹಣಾಧಿಕಾರಿ ಸುಧಾಕರ್, ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಸದಸ್ಯ ಚಂದ್ರಪೂಜಾರಿ, ಚಂದ್ರ ಆಚಾರ್ಯ, ವಿ.ಎ. ಚೆಲುವರಾಜ್, ಕೋಟ ಸಹಕಾರಿ ಸಂಘದ ನಿರ್ದೇಶಕ ಟಿ. ಮಂಜುನಾಥ, ಮಹೇಶ್ಶೆಟ್ಟಿ, ಮಾಜಿ ನಿರ್ದೇಶಕಿ ವಸಂತಿ ಹಾಗೂ ಅರ್ಚಕವೃಂದವರು, ಸ್ಥಳೀಯರು ಉಪಸ್ಥಿತರಿದ್ದರು.