ಉಪ್ಪಿನಂಗಡಿ : ಇತ್ತೀಚೆಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿದ್ದ ಪೆರ್ನೆ ಗ್ರಾಮದ ಕೊರತ್ತಿಕಟ್ಟೆ ಮಾಡತ್ತಾರು ಎಂಬಲ್ಲಿನ 500 ವರ್ಷಗಳ ಇತಿಹಾಸವಿರುವ, ಕಾಡಿನೊಳಗೆ ಪಾಳು ಬಿದ್ದಿರುವ ದೈವಸ್ಥಾನನ್ನು ಅಭಿವೃದ್ಧಿಪಡಿಸುವ ಗ್ರಾಮಸ್ಥರ ಸಂಕಲ್ಪದಂತೆ ಸಪರಿವಾರ ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ಸೋಮವಾರ ಜರಗಿತು.
ಶಿಲಾನ್ಯಾಸ ಕಾರ್ಯಕ್ರಮ ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ನೇತೃತ್ವದಲ್ಲಿ, ಖ್ಯಾತ ಜ್ಯೋತಿಷಿ ಕೆ.ವಿ. ಗಣೇಶ್ ಭಟ್ ಮುಳಿಯ ಅವರ ಉಪಸ್ಥಿತಿಯಲ್ಲಿ ವಿವಿಧ ಪೂಜಾ ವಿಧಿ ವಿಧಾನದೊಂದಿಗೆ ನಡೆಯಿತು.
ದೈವಸ್ಥಾನ ನಿರ್ಮಾಣ ಯೋಜನೆ ಬಗ್ಗೆ ದೈವಸ್ಥಾನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಈಶ್ವರ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮಸ್ಥರ ಸಂಕಲ್ಪ ಮತ್ತು ಸಮಿತಿಯ ತೀರ್ಮಾನದಂತೆ 1.25 ಕೋಟಿ ರೂ. ವೆಚ್ಚದಲ್ಲಿ ದೈವಸ್ಥಾನ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ವ್ಯಾಘ್ರ ಚಾಮುಂಡಿ, ಕೊರತಿ ಮತ್ತು ಉಳ್ಳಾಕ್ಲು ದೈವಗಳಿಗೆ ಗುಡಿ ನಿರ್ಮಾಣ ಮಾಡಲಾಗುವುದು. ಭಂಡಾರದ ಮನೆ, ದೀಪ ಇಡುವವರಿಗೆ ವಸತಿ ಮನೆ ಸಹಿತ ಒಟ್ಟು ಐದು ಕಟ್ಟಡಗಳ ನಿರ್ಮಾಣ ಆಗಲಿದೆ, ದೈವಸ್ಥಾನವನ್ನು ಕೆಂಪು ಕಲ್ಲಿನಿಂದ ಕೇರಳ ಶೈಲಿಯಲ್ಲಿ ಸುಂದರಾಗಿ ನಿರ್ಮಿಸುವ ಯೋಜನೆ ರೂಪಿಸಿದ್ದು, ಗಾಮಸ್ಥರು ಮತ್ತು ದಾನಿಗಳ ಸಹಕಾರ ಅಗತ್ಯ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ವಿಶ್ವೇಶ್ವರ ಭಟ್ ಪೆರ್ನೆಕ್ಕೋಡಿ, ಶೇಷಪ್ಪ ಶೆಟ್ಟಿ ಮುಂಡೋವಿನಕೋಡಿ ಸಹಿತ ನೂರಾರು ಮಂದಿ ದೈವಭಕ್ತರು, ಹಿರಿಯರು ಉಪಸ್ಥಿತರಿದ್ದರು.
ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನ ನಿರ್ಮಾಣ ಸಮಿತಿ ಅಧ್ಯಕ್ಷ ಕಿರಣ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಎನ್. ತಿಮ್ಮಪ್ಪ ನಾಯ್ಕ ಕಾರ್ಲ ವಂದಿಸಿದರು. ಉಪಾಧ್ಯಕ್ಷ, ನಿವೃತ್ತ ಉಪ ತಹಶೀಲ್ದಾರ್ ಶ್ರೀಧರ ಗೌಡ ಕಾರ್ಯಕ್ರಮ ನಿರೂಪಿಸಿದರು.