ಕೊಲ್ಲೂರು: ನವರಾತ್ರಿ ಪ್ರಯುಕ್ತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಅ.7ರಂದು ನವರಾತ್ರಿ ರಥೋತ್ಸವ ಮತ್ತು ಮಹಾಚಂಡಿಕಾ ಯಾಗಗಳು ಭಕ್ತಿ ಮತ್ತು ಸಂಭ್ರಮಪೂರ್ವಕವಾಗಿ ಜರಗಿದವು. ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಮತ್ತು ಸ್ಥಳೀಯ ಸಹಸ್ರಾರು ಭಕ್ತರು ರಥಾರೂಢಳಾದ ಶ್ರೀದೇವಿಯ ವೈಭವವನ್ನು ಕಂಡು ತನ್ಮಯರಾದರು, ಜಯಘೋಷಗಳನ್ನು ಕೂಗಿದರು.
ದೇಗುಲದ ಅರ್ಚಕರಾದ ಕೆ.ಎನ್. ಗೋವಿಂದ ಅಡಿಗ ಮತ್ತು ನಿತ್ಯಾನಂದ ಅಡಿಗ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳ ಸಹಿತ ವಿಶೇಷ ಪೂಜೆ ನಡೆಯಿತು. ನವರಾತ್ರಿ ರಥೋತ್ಸವ ಮತ್ತು ಚಂಡಿಕಾಯಾಗದಲ್ಲಿ ರಾಜ್ಯದ ಭಕ್ತಾದಿಗಳ ಜತೆ ಗೆ ತಮಿಳುನಾಡು ಮತ್ತು ಕೇರಳ ಸಹಿತ ಹೊರರಾಜ್ಯಗಳಿಂದ 30 ಸಾವಿರಕ್ಕೂ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ನಾಣ್ಯಕ್ಕಾಗಿ ಮುಗಿಬಿದ್ದ ಭಕ್ತರು
ನವರಾತ್ರಿ ಪ್ರಯುಕ್ತ ನಡೆದ ವೈಭವದ ರಥೋತ್ಸವದ ಕೊನೆಯಲ್ಲಿ ರಥದಿಂದ ಅರ್ಚಕರು ಎಸೆಯುವ ನಾಣ್ಯವನ್ನು ಪಡೆಯಲು ಸಹಸ್ರಾರು ಭಕ್ತರು ಮುಗಿಬಿದ್ದ ದ್ಯಶ್ಯವು ಪುಳಕಿತಗೊಳಿಸಿತು.
ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇಗುಲದ ವ್ಯವಸ್ಥಾ ಪನ ಸಮಿತಿ ಅಧ್ಯಕ್ಷ ಹರೀಶ ಕುಮಾರ್ ಎಂ. ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ, ಉಪ ಕಾರ್ಯ ನಿರ್ವಹಣಾಧಿಕಾರಿ ಎಚ್. ಕೃಷ್ಣ ಮೂರ್ತಿ, ಅರ್ಚಕ ಶ್ರೀಧರ ಅಡಿಗ, ಕೆ.ಎನ್. ನರಸಿಂಹ ಅಡಿಗ, ಸಮಿತಿ ಸದಸ್ಯರಾದ ರಮೇಶ್ ಗಾಣಿಗ ಕೊಲ್ಲೂರು, ವಂಡಬಳ್ಳಿ ಜಯರಾಮ ಶೆಟ್ಟಿ, ರಾಜೇಶ್ ಕಾರಂತ ಉಪ್ಪಿನಕುದ್ರು, ಅಭಿಲಾಷ್ ಪಿ.ವಿ., ನರಸಿಂಹ ಹಳಗೇರಿ, ಜಯಂತಿ ಪಡುಕೋಣೆ, ದೇಗುಲದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಕೊಲ್ಲೂರು ಗ್ರಾಮ ಪಂಚಾ ಯ ತ್ ಅಧ್ಯಕ್ಷ ಎಸ್. ಕುಮಾರ್, ಜಿ.ಪಂ., ತಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ವಿಜಯದಶಮಿ ಅಕ್ಷರಾಭ್ಯಾಸ
ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ವಿಜಯದಶಮಿ ದಿನ ಪುಟಾಣಿಗಳಿಗೆ ಅಕ್ಷರಾಭ್ಯಾಸ ನಡೆಸುವುದು ಶ್ರೇಯಸ್ಕರ ಎಂಬ ನಂಬಿಕೆಯಿದೆ. ಅಂತೆಯೇ ಮಂಗಳವಾರ ವಿಜಯದಶಮಿಯಂದು ಬೆಳಗ್ಗಿನ ಜಾವದಿಂದ ಸಂಜೆ 4 ಗಂಟೆಯ ತನಕ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸಿದ ರು. ನೂರಾರು ಮಂದಿ ಹೆತ್ತವರು ತಮ್ಮ ಪುಟ್ಟ ಮಕ್ಕಳೊಂದಿಗೆ ಹಾಜರಿದ್ದರು.
ಶ್ರೀ ಕ್ಷೇತ್ರದ ಸರಸ್ವತಿ ಮಂಟಪ ಮಾತ್ರವಲ್ಲದೆ ಚಂಡಿಕಾಯಾಗದ ಹೊರಪೌಳಿಯಲ್ಲಿ ಕೂಡ ವಿದ್ಯಾರಂಭಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಹತ್ತಾರು ಮಂದಿ ಅರ್ಚಕರ ಉಪಸ್ಥಿತಿಯಲ್ಲಿ ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು. ಮಕ್ಕಳ ನಾಲಗೆಯ ಮೇಲೆ ಚಿನ್ನದ ನಾಣ್ಯದಲ್ಲಿ ಓಂಕಾರ ಬರವಣಿಗೆಯಲ್ಲದೆ ಅಕ್ಕಿಯಲ್ಲಿ ಕೂಡ ವಿದ್ಯಾರಂಭ ನಡೆಯಿತು.