ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಜನ್ಮಾಷ್ಟಮಿಯನ್ನು ಮೇ 29 ರಂದು ದೇಗುಲದಲ್ಲಿ ಸರಳವಾಗಿ ಆಚರಿಸಲಾಯಿತು.
ಕೋವಿಡ್-19 ಪರಿಣಾಮವಾಗಿ ಆಯೋಜಿಸಲಾಗಿದ್ದ ಪೂರ್ವ ನಿಯೋಜಿತ ಕಾರ್ಯಕ್ರಮ ರದ್ದು ಮಾಡಲಾಯಿತು. ದೇಗುಲದ ಹೊರ ಹಾಗೂ ಒಳ ಪೌಳಿಯನ್ನು ಹೂವಿನ ಹಾರಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಕಟ್ಟೆಲೆ ಪೂಜೆ, ನೈವೇದ್ಯ, ಮಹಾ ಮಂಗಳಾರತಿ ನಡೆಯಿತು.
ರಾತ್ರಿ ಉತ್ಸವದ ಅಂಗವಾಗಿ ಶ್ರೀದೇವಿಯ ಸನ್ನಿ ಧಿಯಲ್ಲಿ ಪುಷ್ಪ ರಥೋತ್ಸವ ನಡೆಯಿತು. ಅರ್ಚಕರಾದ ಕೆ.ಎನ್. ಗೋವಿಂದ ಅಡಿಗ, ರಾಮಚಂದ್ರ ಅಡಿಗ ಹಾಗೂ ಸುಬ್ರಹ್ಮಣ್ಯ ಅಡಿಗ ಅವರ ನೇತೃತ್ವದಲ್ಲಿ ಪೂಜಾ ವಿಧಿಗಳು ನಡೆದವು. ದೇಗುಲದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ, ಉಪಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅಧೀಕ್ಷಕ ರಾಮಕೃಷ್ಣ ಅಡಿಗ, ಅರ್ಚಕರು ಹಾಗೂ ಸಿಬಂದಿ ಉಪಸ್ಥಿತರಿದ್ದರು.