ಮಲ್ಪೆ: ಕೊಡವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಗಣಪತಿಯ ವಿಗ್ರಹ ಸಹಿತ ರಜತ ಪ್ರಭಾವಳಿ, ಹಸುರುವಾಣಿ ಹೊರೆಕಾಣಿಕೆ ಮೆರವಣಿಗೆಯು ಬುಧವಾರ ಮಲ್ಪೆ ಅಯ್ಯಪ್ಪ ಸ್ವಾಮಿ ಮಂದಿರದಿಂದ ಕೊಡವೂರು ಸಿದ್ಧಿದಾಯಕ ಮಂಟಪಕ್ಕೆ
ವೈಭವಯುತವಾಗಿ ಸಾಗಿ ಬಂತು.
ಬೆಳಗ್ಗೆ ಕೊಡವೂರು ಶಂಕರ ನಾರಾಯಣ ದೇವಸ್ಥಾನದಲ್ಲಿ ವೇ| ಮೂ| ಹಯವದನ ತಂತ್ರಿಗಳ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ, ಸುವರ್ಣ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ಅಯ್ಯಪ್ಪ ಮಂದಿರದಲ್ಲಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ನಡೆಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಚೆಂಡೆ, ವಾದ್ಯಘೋಷಗಳು, ಮೆರ ವಣಿಗೆಯ ಉದ್ದಕ್ಕೂ ಮೆರುಗನ್ನು ನೀಡಿದವು. ರಾತ್ರಿ ವೈವಿಧ್ಯಮಯ ನೃತ್ಯಕಾರ್ಯಕ್ರಮಗಳು ಜರಗಿತು. ಸೆ. 13ರಂದು ಬೆಳಗ್ಗೆ 7.30ಕ್ಕೆ ಶ್ರೀ ಗಣೇಶನ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಬಳಿಕ ಗಣಪತಿ ಹೋಮ, ಮಹಾಪೂಜೆಗಳು ರಾತ್ರಿ ರಂಗಪೂಜೆ ನಡೆಯಲಿವೆ. ಸಂಜೆ 5.30ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉಡುಪಿ ಅದಮಾರು ಮಠದ ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದು ನಾಡೋಜ ಡಾ| ಜಿ. ಶಂಕರ್ ಸೇರಿದಂತೆ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್ ತಿಳಿಸಿದ್ದಾರೆ.