Home ನಂಬಿಕೆ ಸುತ್ತಮುತ್ತ ಜ್ಞಾನಾರ್ಜನೆ 14ನೇ ಗುರು;ಮರದ ಹೆಣ್ಣಾನೆ ಕಂಡು ಗಂಡಾನೆ ಕಂದಕಕ್ಕೆ ಬೀಳುತ್ತೆ!

ಜ್ಞಾನಾರ್ಜನೆ 14ನೇ ಗುರು;ಮರದ ಹೆಣ್ಣಾನೆ ಕಂಡು ಗಂಡಾನೆ ಕಂದಕಕ್ಕೆ ಬೀಳುತ್ತೆ!

3470
0
SHARE

ಶ್ರೀಮದ್ಭಾಗವತದಲ್ಲಿ ಮುಖ್ಯವಾಗಿ ಸಂನ್ಯಾಸಿಯಾದವನು ಹೇಗೆ ಇರಬೇಕು? ಎಂಬುದನ್ನು ಈ ಇಪ್ಪತ್ನಾಲ್ಕು ಗುರುಗಳ, ಅಂದರೆ ದೃಷ್ಟಾಂತಗಳ ಮುಖೇನ ತಿಳಿಸಿಕೊಡುತ್ತದೆ. ಈ ದೃಷ್ಟಾಂತಗಳು ಕೇವಲ ಸಂನ್ಯಾಸಿಯಾದವನಿಗಷ್ಟೇ ಅಲ್ಲದೆ ಸಾಮಾನ್ಯ ಮನುಷ್ಯನಿಗೂ ಅನ್ವಯವಾಗುವಂತದ್ದಾಗಿದೆ. ಹಾಗಾಗಿಯೇ ನಾವು ಶ್ರೀಮದ್ಭಾಗವತವನ್ನು ಓದಿ, ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕು. ಹದಿನಾಲ್ಕನೆಯ ಗುರುವಾಗಿ ಆನೆಯನ್ನು ಉದಾಹರಣೆಯಾಗಿಟ್ಟುಕೊಂಡು ಸಂಯಮದ ಪಾಠವನ್ನು ಹೇಳಲಾಗಿದೆ.

ಸಂನ್ಯಾಸಿಯಾದವನು ಮರದಿಂದ ಮಾಡಿದ ಸ್ತ್ರೀಯನ್ನೂ ಕೂಡ ಕಾಲಿನಿಂದಲೂ ಮುಟ್ಟಬಾರದು. ಇಲ್ಲದಿದ್ದರೆ ಹೆಣ್ಣಾನೆಯಲ್ಲಿ ಆಸಕ್ತವಾದ ಗಂಡಾನೆಯು ಕಂದಕಕ್ಕೆ ಬಿದ್ದು ಬಂಧಿತವಾಗುವಂತೆ, ಮೋಸಕ್ಕೆ ಸಿಲುಕುವಂತಾಗುತ್ತದೆ. ಕಾಡಾನೆಯನ್ನು ಹಿಡಿಯಲು ಆಳವಾದ ಕಂದಕವನ್ನು ನಿರ್ಮಿಸಿ ಅದನ್ನು ಬಿದಿರು ಹುಲ್ಲಿನಿಂದ ಮುಚ್ಚಿ ಅದರ ಮೇಲೆ ಮರದಿಂದ ಮಾಡಿದ ಹೆಣ್ಣಾನೆಯನ್ನು ನಿಲ್ಲಿಸಿಡುತ್ತಾರೆ. ಅದನ್ನು ದೂರದಿಂದ ನೋಡಿದ ಗಂಡಾನೆ ಮರದ ಆನೆಯನ್ನೇ ನಿಜವಾದ ಹೆಣ್ಣಾನೆ ಎಂದುಕೊಂಡು ಅದರ ಹತ್ತಿರ ಬಂದು ಕಂದಕಕ್ಕೆ ಬಿದ್ದು ಪರಾಧೀನವಾಗುತ್ತದೆ. ಮನುಷ್ಯನೂ ಇಂತಹ ಮಾಯೆಗಳನ್ನೇ ಸತ್ಯವೆಂದು ಭ್ರಮಿಸಿ ಪರಾಧೀನನಾಗುವ ಸಂಭವ ಇರುವುದರಿಂದ ಮರದ ಹೆಣ್ಣು ಬೊಂಬೆಯನ್ನೂ ಮುಟ್ಟಬಾರದೆಂದು ಇಲ್ಲಿ ತಿಳಿಸಲಾಗಿದೆ. ಮನುಷ್ಯನು ಮೋಹಪಾಶಕ್ಕೆ ಸುಲಭವಾಗಿ ಬಿದ್ದುಬಿಡುತ್ತಾನೆ. ಹೀಗೆ ಮೋಹದ ಬಲೆಗೆ ಬಿದ್ದವನು ಬದುಕಿನಲ್ಲಿ ಸೆರೆಯಲ್ಲಿದ್ದಂತೆ. ಅವನಿಗೆ ನೀತಿನಿಯಮಗಳಾವುವೂ ಅರಿವಿಗೆ ಬಾರದು. ಕೇವಲ ಆಸೆ ಲಾಲಸೆಗಳಿಗೆ ತುತ್ತಾಗಿ ಸಂನ್ಯಾಸಿಯೂ ಆಗಲಾರ; ಸಂಸಾರಿಯೂ ಆಗಲಾರ. ಹಾಗಾಗಿ ಯಾವುದು ನಮ್ಮನ್ನು ತನ್ನತ್ತ ಆಕರ್ಷಿಸುವುದೋ ಅದರ ಬಗ್ಗೆ ತಿಳಿದುಕೊಂಡು, ಅದರಿಂದಾಗುವ ಪರಿಣಾಮವನ್ನೂ ಅರಿತುಕೊಂಡು ಅಡಿ ಇಡುವುದು ಉತ್ತಮ.

ಶ್ರೀಮದ್ಭಾಗವತವು ಮೃತ್ಯುವು ಸ್ತ್ರೀಯ ರೂಪದಲ್ಲಿಯೂ ಬರಬಹುದು ಎನ್ನುತ್ತದೆ. ಹೆಣ್ಣಾನೆಯಲ್ಲಿ ಆಸಕ್ತವಾದ ಗಂಡಾನೆಯು ಬಲಿಷ್ಠವಾದ ಗಂಡಾನೆಗಳಿಂದ ಕೊಲ್ಲಲ್ಪಡುತ್ತದೆ. ಅಂತೆಯೇ ಮನುಷ್ಯನು ಸ್ತ್ರೀಯ ರೂಪದಲ್ಲಿರಬಹುದಾದ ಮಾಯೆಯನ್ನು ವಿವೇಚನೆಯಿಂದ ಅರಿತುಕೊಂಡು ಅವಳಿಂದ ದೂರ ಇರಬೇಕು. ಬದುಕಿನ ಎಲ್ಲಾ ಆಗುಹೋಗುಗಳಲ್ಲಿ ಉಂಟಾಗುವ ತೊಡಕುಗಳಿಗೆ ನಾವು ಮಾಯೆ ಎಂತಲೇ ಕರೆಯುತ್ತೇವೆ. ತಪ್ಪು ಆದಾಗ ಯಾವ ಮಾಯೆಯಿಂದ ಹೀಗಾಯಿತೋ, ಯಾವ ಮಾಯೆ ನನ್ನನ್ನು ಕುರುಡನನ್ನಾಗಿಸಿತೋ ಎಂದು ಪರಿತಪಿಸುತ್ತೇವೆ. ಅದಕ್ಕಾಗಿಯೇ ಇಲ್ಲಿ ಆನೆಯ ದೃಷ್ಟಾಂತ ಕೊಟ್ಟು ಪಾಠ ಹೇಳಲಾಗಿದೆ. ಮೊದನೆಯದು ಅಜ್ಞಾನದಿಂದಾಗುವ ತಪ್ಪು. ಈ ಅಜ್ಞಾನವು ಭ್ರಮೆಯನ್ನೇ ಸತ್ಯವೆಂದು ನಂಬಿಸಿಬಿಡುತ್ತದೆ. ಆಗ ಕಂದಕವನ್ನು ಆನಂದದ ಆಗರ ಎಂದುಕೊಂಡು, ಆಕರ್ಷಿತರಾಗಿ ಯೋಚನೆ, ವಿವೇಚನೆ ಎಲ್ಲವನ್ನೂ ಬಿಟ್ಟು ಅದರತ್ತ ಹೋಗಿ ನಾವೇ ನಮಗೆ ದುರಂತವನ್ನು ತಂದುಕೊಳ್ಳುತ್ತೇವೆ. ಇನ್ನು ಮಾಯೆಗೆ ಸಿಲುಕುವವರು ಒಬ್ಬಿಬ್ಬರಲ್ಲ. ಒಂದು ಆನೆಯನ್ನು ಕೊಲ್ಲಲು ಇನ್ನಷ್ಟು ಆನೆಗಳು ಆ ಮಾಯೆಗೆ ಸಿಲುಕಿದ್ದೇ ಕಾರಣ. ಮನುಷ್ಯನೂ ಇದರಿಂದ ಹೊರತಲ್ಲ. ಜಗತ್ತೆಲ್ಲ ತುಂಬಿಕೊಂಡಿರುವ ಮಾಯೆಯನ್ನು ಅರಿಯಲು ಒಳಗಣ್ಣು ಬೇಕು. ಮಾಯೆಯ ಹಿಂದೆ ಬಿದ್ದಾಗ ಮೃತ್ಯುವು ಹತ್ತಿರವೇ ಸುಳಿಯುತ್ತಿರುತ್ತಾನೆ. ದುಷ್ಟಕಾರ್ಯಗಳಲ್ಲಿ ತೊಡಗಿಕೊಂಡಿರುವವನು ಯಾವಾಗಲೂ ಇನ್ನೊಬ್ಬ ದುಷ್ಟನಿಂದಲೇ ನಾಶವಾಗುವುದು ಜಾಸ್ತಿ. ಹೆಣ್ಣು ಮಾಯೆ ಎಂಬ ಮಾತಿದೆ. ಆದರೆ ಮೋಹವು, ಕಾಮವು ನಮ್ಮನ್ನು ಹೆಣ್ಣಿನತ್ತ ಎಳೆದುಕೊಂಡು ಹೋಗುತ್ತದೆ ಅಷ್ಟೆ. ಅವಳ ಹಿಂದೆ ತಪ್ಪು ಮಾಡುವವರನ್ನು ಕಂದಕಕ್ಕೆ ದೂಡಲು ಮೃತ್ಯು ಕಾಯುತ್ತಲೇ ಇರುತ್ತಾನೆ!

..ಮುಂದುವರಿಯುವುದು.

||ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

  ಭಾಸ್ವ.

LEAVE A REPLY

Please enter your comment!
Please enter your name here