ಕೆಯ್ಯೂರು : ಇಲ್ಲಿನ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಾ. 21ರಿಂದ ಆರಂಭವಾಗಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ ನಡೆಯಿತು.
ಮಾ. 21ರಂದು ಬೆಳಗ್ಗೆ ಗೊನೆ ಮೂಹೂರ್ತದೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಮಾ. 23ರಂದು ಬೆಳಗ್ಗೆ ದೇವಿ ಪಾರಾಯಣ ಆರಂಭ, ರಾತ್ರಿ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಪೂಜಾ ಬಲಿ, ವಾಸ್ತು ಕಲಶಾಭಿಷೇಕ, ಹೋಮಕುಂಡ ಸಂಸ್ಕಾರ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಮಾ. 24ರಂದು ಬೆಳಗ್ಗೆ 108 ತೆಂಗಿನಕಾಯಿ ಮಹಾಗಣಪತಿ ಹೋಮ ಮತ್ತು ಶತ ಚಂಡಿಕಾಯಾಗ, ಉಗ್ರಾಣ ತುಂಬಿಸುವುದು, ಹಸುರು ಹೊರೆ ಕಾಣಿಕೆ ಸಮರ್ಪಣೆ ನಡೆಯಿತು. ದೇವರಿಗೆ ಸಾನ್ನಿಧ್ಯ ಕಲಶಾಭಿಷೇಕ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಮಾ. 26ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ರಾತ್ರಿ ರಂಗಪೂಜೆ, ದೇವರ ಬಲಿ ಹೊರಟು ಭೂತ ಬಲಿ ಮಹೋತ್ಸವ, ವಸಂತ ಕಟ್ಟೆ ಪೂಜೆ ಬಳಿಕ ಕೆಯ್ಯೂರು ಬೇಡಿ ಎಂದೇ ಪ್ರಸಿದ್ಧವಾಗಿರುವ ಸುಡುಮದ್ದು ಪ್ರದರ್ಶನ ನಡೆಯಿತು. ಮಾ. 27ರಂದು ಮಹಾಗಣಪತಿ ಹೋಮ ಕೋಶ ಪೂಜೆ, ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ಜರಗಿತು. ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆದು ರಾತ್ರಿ ರಂಗಪೂಜೆ, ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎಸ್.ಬಿ. ಜಯರಾಮ ರೈ ಬಳಜ್ಜ , ಸಮಿತಿ ಸದಸ್ಯರಾದ ಎನ್. ದಿವಾಕರ ರೈ ಸಣಂಗಳ, ಇ. ಸಂತೋಷ್ ಕುಮಾರ್ ರೈ ಇಳಾಂತಜೆ, ಶ್ರೀನಿವಾಸ ರಾವ್(ಅರ್ಚಕರು), ಕೆ. ಜಯಂತ ಪೂಜಾರಿ ಕೆಂಗುಡೇಲು, ವೆಂಕಟರಮಣ ಗೌಡ ದೇರ್ಲ, ದಿನೇಶ ಕಾಪುತ್ತಡ್ಕ, ರೂಪಾ ಎಸ್. ರೈ ಇಳಾಂತಜೆ, ಭವಾನಿ ಬಾಲಕೃಷ್ಣ ಪಳ್ಳತ್ತಡ್ಕ, ಹಾಗೂ ಶ್ರೀ ದುರ್ಗಾ ಭಜನ ಮಂಡಳಿ ಕೆಯ್ಯೂರು, ಸ್ಥಳೀಯ ಸಂಘ – ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಭಕ್ತರು ಭಾಗವಹಿಸಿದರು. ಮಾ. 28ರ ಬೆಳಗ್ಗೆ ಉಳ್ಳಾಕುಲು ನೇಮ, ವರ್ಣರ ಪಂಜುರ್ಲಿ, ರಕ್ತೇಶ್ವರಿ, ಪಿಲಿಚಾಮುಂಡಿ ನೇಮ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಅಪರಾಹ್ನ ಕುಪ್ಪೆ ಪಂಜುರ್ಲಿ, ಗುಳಿಗ ದೈವದ ನೇಮ, ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ನಡೆದು ಜಾತ್ರೆ ಸಂಪನ್ನಗೊಂಡಿತು.