ಕಟೀಲು/ಬಜಪೆ: ಇಲ್ಲಿನ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಆರನೇ ದಿನವಾದ ಸೋಮ ವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 5ರಿಂದ ದುರ್ಗಾಶಾಂತಿಹೋಮ, ಶಾಸ್ತಶಾಂತಿ ಪ್ರಾಯಶ್ಚಿತ್ತಗಳು, ಬೆಳಗ್ಗೆ ಭ್ರಾಮರೀವನದಲ್ಲಿ ತತ್ವ ಹೋಮ, ಶಾಂತಿಪ್ರಾಯಶ್ಚಿತ್ತಗಳು, ಕಲಶಾಭಿಷೇಕ, ಬುಧಯಾಗ, ಸಹಸ್ರ ಚಂಡಿಕಾ ಸಪ್ತಶತೀ ಪಾರಾಯಣ, ಕೋಟಿಜಪ ಯಜ್ಞ ಜರಗಿದವು. ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳನ್ನು ಸ್ಥಾಪಿಸಲಾಯಿತು.
ಸಂಜೆ 5ರಿಂದ ಭದ್ರಕ ಮಂಡಲಪೂಜೆ, ಅರ್ಚನೆ, ಮಹಾಬಲಿಪೀಠ ಮತ್ತು ಕ್ಷೇತ್ರ ಪಾಲಕಲಶಾಭಿಷೇಕ, ದಿಶಾ ಹೋಮ ಗಳು, ಚೋರಶಾಂತಿ, ಉತ್ಸವಬಲಿ ಭ್ರಾಮರೀವನದಲ್ಲಿ ಕೋಟಿಜಪಯಜ್ಞ, ಸಹಸ್ರಚಂಡಿಕಾಸಪ್ತಶತೀಪಾರಾಯಣ ಜರಗಿದವು. ಸೋಮವಾರ ಸಹಸ್ರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದು, ಭೋಜನಾಲಯದಲ್ಲಿ ಸುಮಾರು 30 ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ.
ಸೋಮವಾರ ಬೆಳಗ್ಗೆ ಉಪಾಹಾರಕ್ಕೆ ಮೂಡೆ ಹಾಗೂ ಸಾಂಬಾರು , ಕಾರ್ಕಳ ಕೇಕ್ ಮಾದರಿಯ ಸಿಹಿ ತಿಂಡಿ ಮಾಡಲಾಗಿತ್ತು. ಸುಮಾರು 150 ಕೆ.ಜಿ. ಅಕ್ಕಿಯಿಂದ 9,000 ಸಾವಿರ ಜನರಿಗೆ ಬೇಕಾಗುವಷ್ಟು ಮೂಡೆ ತಯಾರಿಸಲಾಗಿದೆ.
ಬಸ್ ನಿಲ್ದಾಣ, ಊಟದ ಕೌಂಟರ್, ರಥಬೀದಿಯಲ್ಲಿ ಬೆಳಗ್ಗೆ ಮತ್ತೆ ಸಂಜೆಯ ಸಮಯದಲ್ಲಿ ಪಾನಕ, ಕೊಕಮ್ ಜ್ಯೂಸ್ ವಿತರಿಸಲಾಯಿತು.