ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ 5ನೇ ದಿನವಾದ ರವಿವಾರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 5ರಿಂದ ಧಾರಾಶುದ್ಧಿ-ಸಾಮವೇದ ಮತ್ತು ಅಥರ್ವವೇದ ಪಾರಾಯಣ ಜರಗಿತು.
ಅನಂತರ ಅವಗಾಹ ಮತ್ತು ಸೇಕ ಶುದ್ಧಿ, ರುದ್ರಯಾಗ, ಶಾಸ್ತ್ರಬಿಂಬಶುದ್ಧಿ, ಮನ್ಯುಸೂಕ್ತಹೋಮ, ಪಂಚದುರ್ಗಾ ಹೋಮಗಳು, ರಾತ್ರಿಸೂಕ್ತ ಹೋಮ, ಒಳಗಿನ ನಾಗ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ಜರಗಿದವು.
ಬೆಳಗ್ಗೆ ಭ್ರಾಮರೀವನದಲ್ಲಿ ಅಂಗಾರಕ ಯಾಗ, ಸಹಸ್ರಚಂಡಿಕಾ ಸಪ್ತಶತೀ ಪಾರಾ ಯಣ, ಕೋಟಿ ಜಪಯಜ್ಞ, ನವಗ್ರಹವನ, ನಕ್ಷತ್ರವನ, ರಾಶಿವನದಲ್ಲಿ ಆಯಾ ವೃಕ್ಷಗಳ ಸ್ಥಾಪನೆ ಜರಗಿತು. ಸಂಜೆ 5 ರಿಂದ ವನದುರ್ಗಾಪೂಜೆ ಮತ್ತು ಹೋಮ, ದುರ್ಗಾ ಮಾರ್ಕಂಡೇಯ ಪ್ರೋಕ್ತಪ್ರಾಯ ಶ್ಚಿತ್ತ ಹೋಮಗಳು, ಉತ್ಸವ ಬಲಿ, ಭ್ರಾಮರೀ ವನದಲ್ಲಿ ಕೋಟಿ ಜಪಯಜ್ಞ, ಸಹಸ್ರಚಂಡಿಕಾಸಪ್ತಶತೀ ಪಾರಾಯಣ ಜರಗಿದವು.
ರವಿವಾರ ಗಣರಾಜ್ಯೋತ್ಸವದ ದಿನ ಮತ್ತು ರಜೆ ದಿನವಾಗಿದ್ದು ಸುಮಾರು 90 ಸಾವಿರಕ್ಕೂ ಅಧಿಕ ಜನರು ದೇವಸ್ಥಾನಕ್ಕೆ ಭೇಟಿ, ದೇವಿಯ ದರ್ಶನ ಪಡೆದರು. ವಿಟ್ಲ, ಸಾಲೆತ್ತೂರು ಹಾಗೂ ವಿವಿಧ ಕಡೆಗಳಿಂದ ಹೊರೆಕಾಣಿಕೆ ಸಮರ್ಪಣೆಯಾಗಿದೆ. ಉಡುಪಿ, ಮೂಲ್ಕಿ ಭಾಗದ ಬರುವ ಭಕ್ತರು ಕಿನ್ನಿಗೋಳಿಯಿಂದ ಉಲ್ಲಂಜೆ ರಸ್ತೆಯಲ್ಲಿ ಬಂದು ಮಲ್ಲಿಗೆಯಂಗಡಿ ಮಾಂಜ ದಲ್ಲಿ ವಿಶಾಲವಾದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಲು ಅವಕಾಶವಿದೆ. ದೇವಸ್ಥಾನದಲ್ಲಿ ಹೋಗುವ ಹೊಸ ಸೇತುವೆಯ ಇಕ್ಕೆಲಗಳಲ್ಲಿ ಶ್ರೀದೇವಿ ಪುರಾಣವನ್ನು ಸಾರುವ ತೈಲ ಚಿತ್ರಗಳ ಅನಾವರಣಗೊಂಡಿದೆ.
ಭ್ರಾಮರೀ ವನದಲ್ಲಿ ಪಕ್ಕದ ನದಿಯಲ್ಲಿ ಎರಡು ಕಾರಂಜಿಗಳು ಅಳವಡಿಸಲಾಗಿದ್ದು, ರಾತ್ರಿಯ ಹೊತ್ತಿನಲ್ಲಿ ವಿದ್ಯುತ್ ದೀಪದಲ್ಲಿ ವರ್ಣರಂಜಿತವಾಗಿ ಕಂಗೊಳಿಸುತ್ತಿದೆ. ರವಿವಾರ ದೇವ ಸ್ಥಾನಕ್ಕೆ ಬೆಳಗ್ಗೆನಿಂದಲೇ ಭಕ್ತರು ಆಗಮಿಸುತ್ತಿ ರುವುದು ಕಂಡು ಬಂತು.
ದೇವಸ್ಥಾನದ ರಥಬೀದಿಯಿಂದ ಕೆಳಗೆ ಕಟೀಲು ಸೇತುವೆ ತನಕ ಸರತಿ ಸಾಲು ಹಾಗೂ ಉಗ್ರಾಣದ ಬದಿಯಿಂದ ಸಭಾ ಮಂಟಪದ ತನಕ ಭಕ್ತರ ಸರತಿ ಸಾಲಿನಲ್ಲಿ ನಿಲ್ಲಲು ವ್ಯವಸ್ಥೆ ಮಾಡಲಾಗಿದೆ.
ಭೋಜನಕ್ಕೆ 10 ಕೌಂಟರ್
ಭೋಜನ ಶಾಲೆಯಲ್ಲಿ ಬೆಳಗ್ಗಿನ ಫಲಾಹಾರಕ್ಕೆ 10 ಕೌಂಟರ್ಗಳು, ಮಧ್ಯಾ ಹ್ನದ ಭೋಜನಕ್ಕೆ 10 ಕೌಂಟರ್ ಹಾಗೂ 20, 30 ಸಾಲುಗಳಲ್ಲಿ 2,000 ಸಾವಿರ ಜನರು ಕುಳಿತು ಊಟ ಮಾಡುವ ವ್ಯವಸ್ಥೆ ಅಚ್ಚುಕಟ್ಟಾಗಿತ್ತು. ಸುಮಾರು 2,000 ಸಾವಿರ ಸ್ವಯಂಸೇವಕರು ಧಾರ್ಮಿಕ ಕಾರ್ಯದ ವ್ಯವಸ್ಥೆಯನ್ನು ಯಶಸ್ವಿಗೊಳಿಸುವಲ್ಲಿ ಸಹಕಾರ ನೀಡಿದ್ದಾರೆ.