Home ನಂಬಿಕೆ ಸುತ್ತಮುತ್ತ ಕೇನೋಪನಿಷತ್ತಿನ ಪ್ರಕಾರ ಯಾವುದು ಬ್ರಹ್ಮ?

ಕೇನೋಪನಿಷತ್ತಿನ ಪ್ರಕಾರ ಯಾವುದು ಬ್ರಹ್ಮ?

1947
0
SHARE

ಬ್ರಹ್ಮ ಎಂದರೆ ಯಾವುದು? ಏನು? ಎಂಬ ಪ್ರಶ್ನೆ ಉದ್ಭವಿಸುತ್ತಲೇ ಇರುತ್ತವೆ. ಪ್ರಪಂಚವನ್ನು ಬ್ರಹ್ಮಾಂಡ ಎಂದೂ ಕರೆಯಲಾಗುತ್ತದೆ. ಬ್ರಹ್ಮದೇವ ಸೃಷ್ಟಿಕರ್ತನೆಂದು ಹೇಳಲಾಗಿದೆ. ಇದರ ಹೊರತಾಗಿಯೂ ಬ್ರಹ್ಮ ಎಂಬುದಕ್ಕೆ ವಿಶಾಲವಾದ ಅರ್ಥವಿದೆ; ಆಳವಿದೆ. ಉಪನಿಷತ್ತುಗಳಲ್ಲೊಂದಾದ ಕೇನೋಪನಿಷತ್ತಿನಲ್ಲಿ ಬ್ರಹ್ಮ ಎಂದರೆ ಯಾವುದು? ಎಂಬುದನ್ನು ಹೇಳಲಾಗಿದೆ.

ಕೇನೋಪನಿಷತ್ ಬ್ರಹ್ಮವನ್ನು ಹೀಗೆಂದು ಹೇಳಿದೆ: ಪಾರಮಾರ್ಥಿಕವಾದ ಯಾವ ವಸ್ತುವು ವಾಙ್ಮೂಲವಾದ ಶಬ್ದಗಳಿಂದ ಉಲ್ಲೇಖಿಸಲು ಅಸಾಧ್ಯವಾಗಿರುವಂತಹದ್ದೋ ಅಂತೆಯೇ ವಾಕ್ಕು ಹೊರಡಲು ಕಾರಣವಾಗಿದೆಯೋ ಇಂದ್ರಿಯಗಳನ್ನು ದಾಟಿ ದೂರದಲ್ಲೆಲ್ಲೋ ಇರುವುದೋ ಆ ಪರಮತತ್ತ್ವವೇ ಬ್ರಹ್ಮವಾಗಿದೆ.

ಬ್ರಹ್ಮವು ಇಂದ್ರಿಯ ಗೋಚರವಾದುದಷ್ಟೇ ಅಲ್ಲ. ಇಂದ್ರಿಯ ಅಗೋಚರವಾದುದನ್ನು ಮನುಷ್ಯನು ಕಾಣಲು ಮೊದಲು ಇಂದ್ರಿಯ ಅವಲಂಬನೆಯನ್ನು ಬಿಡಬೇಕು. ಅದಕ್ಕೆ ತಪೋಜ್ಞಾನಸಮಾಧಿಗಳ ಸಾಧನೆಬೇಕು, ಅವುಗಳ ಸಹಾಯವೂ ಅಗತ್ಯ. ಈ ಬ್ರಹ್ಮವನ್ನು ಹಾಗೆ ಸುಮ್ಮನೆ ಭಾವಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮ ಮನಸ್ಸಿಗಿರುವ ಮನನಶಕ್ತಿಯನ್ನು ಆಳುವ ಶಕ್ತಿ ಬ್ರಹ್ಮವಾಗಿದೆ. ಕಣ್ಣಿನಿಂದ ದರುಶನ ಅಸಾಧ್ಯವಾದದು. ಆದರೆ ಅದೇ ಕಣ್ಣುಗಳ ದರ್ಶನಶಕ್ತಿಯು ಯಾವುದರ ಅಧೀನದಲ್ಲಿರುವುದೋ ಅದೇ ಬ್ರಹ್ಮ.

ಬ್ರಹ್ಮವೆಂದರೆ ಕಿವಿಗಳಿಂದ ಕೇಳಲಾಗದ್ದು ಮತ್ತು ಕಿವಿಗಳಿಗೆ ಶ್ರವಣಶಕ್ತಿಯನ್ನು ನೀಡುವಂತದ್ದು. ಯಾವುದರ ಅಸ್ತಿತ್ವವು ಪ್ರಾಣಕ್ಕೆ ಅಧೀನವಲ್ಲವೋ ಪ್ರಾಣಶಕ್ತಿಯು ಯಾವುದರ ಅಧೀನವೋ ಅಂತಹ ಎಲ್ಲಕ್ಕೂ ಶಕ್ತಿಯನ್ನು ಕೊಡುವ ತತ್ತ್ವವೇ ಬ್ರಹ್ಮವೆಂದು ತಿಳಿಯಬೇಕು. ಇಂದ್ರಿಯಗೋಚರವಾದುದು ಮಾತ್ರ ಎಂದೂ ಬ್ರಹ್ಮವಾಗಲಾರದು. ಇದು ಕೇನೋಪನಿಷತ್ತಿನಲ್ಲಿ ವಿವರಿಸಲಾದ ಬ್ರಹ್ಮ ಸ್ವರೂಪ.

ನಮ್ಮನ್ನು ಮೀರಿದ ನಮ್ಮನ್ನು ಆಳುವ ಬರಿಗಣ್ಣಿಗೆ ಕಾಣದ, ಕಿವಿಗೆ ಕೇಳಿಸದ, ಮನಸ್ಸಿನ ಪರಧಿಯನ್ನು ಮೀರಿ ಕಲ್ಪಿಸಿಕೊಳ್ಳಲಾಗದ ಆದರೆ ಇವೆಲ್ಲವಕ್ಕೂ ಕಾರಣವಾದ, ಪ್ರಾಣಶಕ್ತಿಗೂ ಕಾರಣವಾದ ವಿಶೇಷವಾದ ಶಕ್ತಿಯೇ ಬ್ರಹ್ಮ. ಇಂತಹ ಬ್ರಹ್ಮವನ್ನು ಕಾಣಲಾಗದೇ ಹೋದರೂ ಅದಕ್ಕೆ ಧ್ಯೇಯರಾಗಿರಬೇಕಾದ ಅಗತ್ಯವಿದೆ. ಬ್ರಹ್ಮನಿಂದಾದ ಬ್ರಹ್ಮಾಂಡದಲ್ಲಿ ಬ್ರಹ್ಮನಿಂದಲೇ ಆದ ಸಕಲ ಜೀವಿಗಳಿಗೂ ಬದುಕುವ ಅವಕಾಶವಿದೆ. ಕೇನೋಪನಿಷತ್ ದೇಹವನ್ನು ಆತ್ಮಸಾಧನೆಗಾಗಿ ಒದಗಿಬಂದ ಅವಕಾಶ, ಈ ದೇಹವಿರುವಾಗಲೇ ಪರಬ್ರಹ್ಮವನ್ನು ಸಾಧಿಸುವವನು ಅವನು ಸತ್ ಆಗುವನು ಮತ್ತು ಅವನ ಅಸ್ತಿತ್ವವು ಸತ್ಯವಾಗಿರುವುದು ಎಂದಿದೆ. ಆತ್ಮತತ್ತ್ವವನ್ನು ಅರಿಯದವನು ಅಸತ್ ಆಗಿರುವನು. ಅಂದರೆ ಅಸ್ತಿತ್ವವಿಲ್ಲದವನು. ಇದಕ್ಕಿಂತಲೂ ಹಾನಿಕರವಾದುದು ಇನ್ನೊಂದಿಲ್ಲ ಎನ್ನುತ್ತ ಸಮಸ್ತಭೂತಕೋಟಿಗಳಲ್ಲೂ ನೆಲೆಯಾಗಿರುವ ಪರಂಬ್ರಹ್ಮವನ್ನು ಸರಿಯಾಗ ವಿವೇಚಿಸಿ ಅರಿಯಬೇಕು. ಅಂತವರೇ ಧೀರರೂ ಸಮದರ್ಶಿಗಳೂ ಆಗುವರು. ಆನಂತರದಲ್ಲಿ ಈ ದೇಹವನ್ನು ದಾಟಿ ಹೋಗಿ ಪುನರ್ಜನ್ಮವಿಲ್ಲದ ಅಮೃತಭಾವವನ್ನು ತಾಳಿ ಬ್ರಹ್ಮನೊಡನೆ ಅವಿನಾಭಾವ ಹೊಂದಿ ಸ್ವರಾಜ್ಯದಿಂದ ಬೆಳಗುವರು ಎಂದು ಕೇನೋಪನಿಷತ್ ಹೇಳಿದೆ.

ಬ್ರಹ್ಮವನ್ನು ಅರಿಯುವುದಕ್ಕಾಗಿಯೇ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಕಣ್ಣಿಗೆ ಕಾಣದ್ದನ್ನು ಅಂದರೆ ಪರಬ್ರಹ್ಮನನ್ನು ಹುಡುಕುವ ಛಲ ಎಲ್ಲರದ್ದಾಗಬೇಕು. ಬದುಕಿನ ಸೌಂದರ್ಯವಿರುವುದೇ ಇಲ್ಲಿ. ಪ್ರತಿಯೊಂದು ಕ್ರಿಯೆ, ಪ್ರತಿಕ್ರಿಯೆಗೆ ಮೊದಲು ಅದರ ಪ್ರತಿಫಲದ ವಿವೇಚನೆ ಅಗತ್ಯ. ನಮ್ಮ ಇಡೀ ದೇಹವು ಬ್ರಹ್ಮದ ಅಧೀನದಲ್ಲಿರುವಾಗ ನಾವು ಹೇಗೆ ನಡೆದುಕೊಳ್ಳಬೇಕೆಂಬುದನ್ನು ಅರಿತುಕೊಳ್ಳಬೇಕು. ನೋಡುವ ಕಣ್ಣು, ಕೇಳುವ ಕಿವಿ, ಯೋಚಿಸುವ ಮನಸ್ಸು, ದೇಹವನ್ನು ರಕ್ಷಿಸುತ್ತಿರುವ ಪ್ರಾಣ ಎಲ್ಲವೂ ನಮ್ಮವೇ ಆದರೂ ಅದು ಬ್ರಹ್ಮನ ಅಧೀನ. ಹಾಗಾಗಿ ಹೇಗೆ ನಾವು ಪ್ರಾಣ ಅಂದರೆ ಉಸಿರಾಟಕ್ಕೆ ಉತ್ತಮವಾದ ಗಾಳಿಯನ್ನು ಬಯಸುತ್ತೇವೆಯೋ ಅಂತೆಯೇ ನಮ್ಮ ಪಂಚೇದ್ರಿಯಗಳು ಉತ್ತಮವಾದುದನ್ನೇ ಉತ್ಪತ್ತಿ ಮಾಡಬೇಕು. ಬ್ರಹ್ಮನ ಅರಿಯುವ ಏಕಾಗ್ರತೆ ಮತ್ತು ಬ್ರಹ್ಮಾಂಡವನ್ನು ಉಪಯೋಗಿಸುವಲ್ಲಿನ ವಿವೇಚಾನಾಶಕ್ತಿ ಕ್ರಮಬದ್ಧವಾಗಿದ್ದಲ್ಲಿ, ಸಮದರ್ಶಿತ್ವವಿದ್ದಲ್ಲಿ ಬದುಕು ಸದಾ ಆನಂದಮಯ.

|| ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ (ಭಾಸ್ವ).

LEAVE A REPLY

Please enter your comment!
Please enter your name here