ಕಟೀಲು : ಕಟೀಲು ಶ್ರೀ ದುರ್ಗೆಯ ಬ್ರಹ್ಮಕಲಶೋತ್ಸವ ಜನವರಿ 22ರಿಂದ ಫೆ. 4ರ ತನಕ ನಡೆಯಲಿದ್ದು, 29 ಕೋಟಿ ರೂ. ವೆಚ್ಚ ದಲ್ಲಿ ಪರಿಸರದ ರಸ್ತೆಗಳ ಅಭಿವೃದ್ಧಿ ನಡೆಯುತ್ತಿದೆ ಎಂದು ಬ್ರಹ್ಮಕಲ ಶೋತ್ಸವ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ದೇವಸ್ಥಾನದ ಮೂಲಸ್ಥಳ ಕುದುರುವಿನಲ್ಲಿ ರವಿವಾರ ನಡೆದ ಬ್ರಹ್ಮಕಲಶೋತ್ಸವ ಸ್ವಾಗತ ಮತ್ತು ಆರ್ಥಿಕ ಸಮಿತಿಯ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ಬ್ರಹ್ಮಕಲಶದ ಯಶಸ್ಸಿಗಾಗಿ 70 ಸಮಿತಿಳನ್ನು ರಚಿಸಲಾಗಿದೆ. ಧಾರ್ಮಿಕ ಸಭೆಗಳಲ್ಲಿ ಸಮಯ ಪಾಲನೆಗೆ ಒತ್ತು ನೀಡಲಾಗುತ್ತಿದ್ದು, ಒಂದು ಗಂಟೆಯಲ್ಲಿ ಮುಗಿಸಲು ತೀರ್ಮಾನಿಸಲಾಗಿದೆ ಎಂದರು. 30 ಎಕರೆಯಲ್ಲಿ ಪಾರ್ಕಿಂಗ್ ಭಕ್ತರ ವಾಹನಗಳ ನಿಲುಗಡೆಗೆ 30 ಎಕರೆ ಜಾಗವನ್ನು ಸಮತಟ್ಟು ಮಾಡಲಾಗಿದೆ ಎಂದು ಅರ್ಚಕ ಶ್ರೀಹರಿನಾರಾಯಣ ಆಸ್ರಣ್ಣ ಹೇಳಿದರು. ಶುಭ ಕೋರುವವರು ವಸ್ತ್ರದ ಬ್ಯಾನರನ್ನೇ ಬಳಸಬೇಕು ಎಂದು ವಿನಂತಿಸಿದರು.
ಭಕ್ತರ ಸಹಕಾರ ಅಗತ್ಯ ದೇವಸ್ಥಾನದ ಅಭಿವೃದ್ಧಿಗೆ ಸ್ಥಳದ ಕೊರತೆಯಿದ್ದು, ಪರಿಸರದ 8 ಎಕರೆ ಜಾಗವನ್ನು ಗುರುತಿಸಲಾಗಿದೆ. ಭಕ್ತರು ಧನಸಹಾಯ ನೀಡಿದರೆ ಆ ಜಾಗವನ್ನು ದೇವಸ್ಥಾನದ ಹೆಸರಿಗೆ ಮಾಡಬಹುದು ಎಂದು ಶಿಬರೂರಿನ ಸುಬ್ರಹ್ಮಣ್ಯ ಪ್ರಸಾದ್ ಹೇಳಿದರು.
ಜಾಗ ಖರೀದಿ ಪ್ರಸ್ತಾವ ವರ್ಷಗಳ ಹಿಂದೆಯೇ ಇದ್ದು, ಈಗ ಕಾಲ ಕೂಡಿ ಬಂದಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು. ಸ್ವಚ್ಛ ಕಟೀಲು ಸ್ವತ್ಛ ಕಟೀಲು ಪರಿಕಲ್ಪನೆಯಡಿ ಆರೋಗ್ಯದ ದೃಷ್ಟಿಯಿಂದ ಒಂದು ಆ್ಯಂಬುಲೆನ್ಸ್ ಮತ್ತು 5 ಬೆಡ್ ಗಳ ವಿಶೇಷ ತುರ್ತು ನಿಗಾ ಘಟಕ ತೆರೆಯಲಾಗುವುದು. ಕುಡಿಯುವ ನೀರಿನ ವ್ಯವಸ್ಥೆಗೂ ಸಹಕಾರ ನೀಡಲಾಗುವುದು ಎಂದು ಸಂಜೀವಿನಿ ಸಂಸ್ಥೆಯ ಡಾ| ಸುರೇಶ್ ರಾವ್
ಹೇಳಿದರು. ಗಿಡಗಳನ್ನು ನೆಟ್ಟು ಹಸಿರು ಕ್ರಾಂತಿಯೂ ನಡೆಯಲಿ ಎಂದು ಆಶಾಜ್ಯೋತಿ ರೈ ತಿಳಿಸಿದರು.
ಅರ್ಚಕ ಅನಂತ ಆಸ್ರಣ್ಣ, ಪ್ರದೀಪ ಕುಮಾರ್ ಕಲ್ಕೂರ, ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಮಾಹಿತಿ ನೀಡಿದರು. ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಮಾಜಿ ಸಚಿವ ಅಭಯಚಂದ್ರ ಜೈನ್, ಸುಧೀರ್ ಕುಮಾರ್ ಶೆಟ್ಟಿ ಕೊಡೆತ್ತೂರು ಉಪಸ್ಥಿತರಿದ್ದರು.