Home ಧಾರ್ಮಿಕ ಸುದ್ದಿ ಕಟೀಲು: 200ಕ್ಕೂ ಅಧಿಕ ಸ್ವಯಂಸೇವಕರಿಂದ ಶ್ರಮದಾನ

ಕಟೀಲು: 200ಕ್ಕೂ ಅಧಿಕ ಸ್ವಯಂಸೇವಕರಿಂದ ಶ್ರಮದಾನ

1664
0
SHARE

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ವಿವಿಧೆಡೆ 200ಕ್ಕೂ ಅಧಿಕ ಸ್ವಯಂಸೇವಕರಿಂದ ರವಿವಾರದಂದು ಕರಸೇವೆ ಜರಗಿತು.

ಸಿತ್ಲಬೈಲಿನಲ್ಲಿ ನಿರ್ಮಾಣಗೊಂಡ ಪಾಕಶಾಲೆ ಅಡುಗೆಗೆ ಬೇಕಾಗುವ ದೊಡ್ಡ ಮಟ್ಟದ 54 ಒಲೆಗಳು ಸಿದ್ದಗೊಳ್ಳುತ್ತಿದ್ದು, ಬೇಕಾಗುವ ಉರುವಲು ಕಟ್ಟಿಗೆಗಳನ್ನು ಸ್ವಯಂ ಸೇವಕರು ಸಂಗ್ರಹಿಸಿದರು.

ಕಟೀಲು ಭೋಜನ ಶಾಲೆಯ ಹಿಂದುಗಡೆ ಹಾಗೂ ವಿಶೇಷ ವಿಶ್ರಾಂತಿಗೃಹದ ಹಿಂಭಾಗದಲ್ಲಿ ರಸ್ತೆಯನ್ನು 40 ಅಡಿಗಳಷ್ಟು ವಿಸ್ತರಣೆಗೊಳಿಸಲಾಗಿದ್ದು ಅತಿಥಿಗೃಹದ ಹಿಂಭಾಗದಲ್ಲಿ ರಸ್ತೆಯ ಬದಿಯಲ್ಲಿ ಇಂಟರ್‌ಲಾಕ್‌ನ್ನು ಅಳವಡಿಸಲಾಯಿತು.

ನೂತನ ಪಾಕಶಾಲೆಯ ಹೊರಭಾಗದಲ್ಲಿ ನೆಲಕ್ಕೆ ಇಂಟರ್‌ ಲಾಕ್‌ ಆಳವಡಿಕೆ ಕಾರ್ಯ ನಡೆದಿದೆ. ಪ್ರಸ್ತುತ ಈಗ ಇರುವ ಭೋಜನ ಶಾಲೆಯ ಮುಂಭಾಗದಲ್ಲಿ ಹಾಗೂ ಶೌಚಾಲಯದ ಬದಿಯಲ್ಲಿ ಇರುವ ಜಾಗದಲ್ಲಿ ಕೈತೋಟ ನಿರ್ಮಾಣ ಕೆಲಸವು ಪ್ರಗತಿಯಲ್ಲಿದೆ.

ಪಾರ್ಕಿಂಗ್‌ ಸ್ಥಳದಲ್ಲಿ ಅಂತಿಮವಾಗಿ ಜೆಸಿಬಿ, ಹಿಟಾಚಿಗಳು, ರಸ್ತೆ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡಿವೆ. ದೇವಸ್ಥಾನದ ರಥಬೀದಿಯಲ್ಲಿರುವ ಮೂರು ಮಹಡಿಯ ದುರ್ಗಾಪ್ರಸಾದ್‌ ಕಟ್ಟಡದ ತೆರವು ಕಾರ್ಯಭರದಿಂದ ನಡೆಯುತ್ತಿದೆ.

LEAVE A REPLY

Please enter your comment!
Please enter your name here