Home ನಂಬಿಕೆ ಸುತ್ತಮುತ್ತ ನವರಾತ್ರಿ ಸಡಗರ; ಕಾತ್ಯಾಯನಿದೇವಿ ಮಹಿಮೆ ಏನು…ಯಾರೀಕೆ?

ನವರಾತ್ರಿ ಸಡಗರ; ಕಾತ್ಯಾಯನಿದೇವಿ ಮಹಿಮೆ ಏನು…ಯಾರೀಕೆ?

867
0
SHARE

ಕಾತ್ಯಾಯನಾಯ ವಿದ್ಮಹೇ ಕನ್ಯಕುಮಾರಿ ಧೀಮಹಿ |
ತನ್ನೋ ದುರ್ಗಿಃ ಪ್ರಚೋದಯಾತ್ ||

ಕಾತ್ಯಾಯನನ ಮಗಳು ಕಾತ್ಯಾಯಿನಿ. ಅಯನ ಎಂದರೆ ಹಲವು ನಕ್ಷತ್ರಗಳ ಒಂದು ಸಮೂಹ. ಇದರ ಪಾಲಕರು ಕಾತ್ಯಾಯನ ಋಷಿಗಳಾಗಿದ್ದರು. ಈ ಅಯನದಲ್ಲಿ ಒಮ್ಮೆ ದುಷ್ಟ ಸ್ಪಂದನಲಹರಿಗಳ ಶಕ್ತಿಯುತ ಸಮೂಹವೊಂದು ಆಕ್ರಮಣ ಮಾಡಿದಾಗ ಆ ಘರ್ಷಣೆಗೆ ಬಹುದೊಡ್ಡದಾದ ಉತ್ಪಾತವಾಗುವ ಸಮಯ ಬಂದಿತ್ತು. ಆಗ ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿಲಹರಿಗಳ ಒಂದು ಸಣ್ಣ ಅಂಶವು ಚಿಕ್ಕ ಬಾಲಕಿಯ ರೂಪದಲ್ಲಿ ಕಾತ್ಯಾಯನರ ಆಶ್ರಮವನ್ನು ಸೇರಿತು. ಕಾತ್ಯಾಯನ ಋಷಿಗಳು ಅವಳನ್ನು ತನ್ನ ಮಗಳೆಂದೇ ಸಲಹಿ, ಕಾತ್ಯಾಯನಿ ಎಂಬ ಹೆಸರನ್ನಿಟ್ಟರು. ಆಕೆ ಈ ದುಷ್ಟ ಸ್ಪಂದನಲಹರಿಗಳನ್ನು ಯೋಗ್ಯವಾದ ಅಥವಾ ಉತ್ತಮ ಸ್ಪಂದನಲಹರಿಗಳನ್ನಾಗಿ ಪರಿವರ್ತಿಸಿದಳು. ದೇವಾನುದೇವತೆಗಳ ಪ್ರೀತಿಗೆ ಪಾತ್ರಳಾಗಿ ಕಾತ್ಯಾಯನಿದೇವಿ ಎಂದೇ ಪ್ರಸಿದ್ಧಳಾದಳು. ಇದು ಕಾತ್ಯಾಯನಿಯ ಬಗೆಗಿನ ಕಥೆ.

ನವರಾತ್ರಿಯ ಆರನೆಯ ದಿನದ ಪರ್ವಕಾಲದಲ್ಲಿ ದೇವಿಯ ಕಾತ್ಯಾಯನಿ ರೂಪವನ್ನು ಆರಾಧಿಸಲಾಗುತ್ತದೆ. ಕಾತ್ಯಾಯನಿ ದೇವಿಯು ತ್ರಿಮೂರ್ತಿರೂಪ ಎಂದೂ ಹೇಳಲಾಗುತ್ತದೆ. ಮಹಿಷಾಸುರನನ್ನು ಸಂಹರಿಸಿದ ಅವತಾರವೂ ಕಾತ್ಯಾಯನಿ ರೂಪವೇ ಆಗಿದೆ. ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸುವ ದೇವಿಯನ್ನು ನಿಷ್ಠೆಯಿಂದ ಪೂಜಿಸಿದರೆ ದುರಿತಗಳೆಲ್ಲವೂ ದೂರವಾಗುವುದು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷದಾಯಕಿಯೂ ಈಕೆಯೇ ಆಗಿರುವುದರಿಂದ ಇವಳ ಕೃಪೆಗೆ ಪಾತ್ರರಾದರೆ ಸದ್ಗತಿಯನ್ನು ನೀಡುತ್ತಾಳೆ.

ಕಾತ್ಯಾಯನಿದೇವಿಯನ್ನು ನಾವು ಹೀಗೂ ಅರ್ಥೈಸಿಕೊಳ್ಳಬಹುದು. ಅಯನ ಎಂಬುದು ನಕ್ಷತ್ರಗಳ ಸಮೂಹವೆಂದು ಅರ್ಥಕೊಡುತ್ತದೆ. ಅಂದರೆ ನಾವು ಒಂದು ಸಮೂಹವಾಗಿ ಬದುಕಬೇಕು. ಅಂತಹ ನಮ್ಮ ಸಮೂಹವನ್ನು ರಕ್ಷಿಸುವವಳು ಈ ಕಾತ್ಯಾಯನಿ. ಸಮೂಹ ಎಂಬ ಪದವು ಹೇಳಿದಷ್ಟು ಸುಲಭವಲ್ಲ. ಒಂದಿಷ್ಟು ಜನಸಮೂಹವನ್ನು ಒಂದಾಗಿ ಬಾಳುವಂತೆ ಒಗ್ಗೂಡಿಸುವುದು ಕಲಿಯುಗದಲ್ಲಿ ಇಂದಿಗೂ ಅಸಾಧ್ಯವಾದ ಕಾರ್ಯ. ಆದರೆ ಇದಕ್ಕೆ ಕಾರಣವನ್ನು ಹುಡುಕುತ್ತ ಹೋದಾಗ ಸಿಗುವುದು ಕಾರಣವಾಗಿ ನಿಲ್ಲುವುದು ನಮ್ಮ ಮನಸ್ಸು. ಮಾನವನು ಸಂಘಜೀವಿಯೇ ಆಗಿದ್ದರೂ ತಾವೆಲ್ಲರೂ ಒಂದೇ ಎಂಬ ಸಮೂಹಭಾವ ಅಥವಾ ಏಕತೆಯ ಭಾವವನ್ನು ಇನ್ನೂ ಬೆಳೆಸಿಕೊಂಡಿಲ್ಲ. ದೇವಾರಾಧನೆಯ ಹೆಸರಿನಲ್ಲಿ ಒಂದಾಗುವ ನಾವು ಮನಸ್ಸಿನಿಂದ ಒಂದಾಗಬೇಕು. ಎಲ್ಲರೂ ಒಂದಾಗಿ ನಡೆದರೇ ಶಕ್ತಿ. ಪರಸ್ಪರರಲ್ಲಿ ಪ್ರೀತಿ-ಸೌಹಾರ್ಧತೆಯಿಂದ ಬಾಳಬೇಕು. ಎಲ್ಲರೂ ಒಳ್ಳೆಯತನವನ್ನು ಬೆಳೆಸಿಕೊಳ್ಳಬೇಕೆಂಬುದನ್ನು ಈ ದೇವಿ ಸೂಚಿಸುತ್ತಾಳೆ. ಕಾತ್ಯಾಯನಿ ದೇವಿಯು ಅಯೋಗ್ಯ ಸ್ಪಂದನಲಹರಿಗಳನ್ನು ಯೋಗ್ಯಲಹರಿಗಳಾಗಿ ಪರಿವರ್ತಿಸಿದ್ದಾಳೆ ಎಂಬುದು ಇದಕ್ಕೆ ಸಾಕ್ಷಿ.

ನವರಾತ್ರೆಯ ಕಾಲದಲ್ಲಿ ನಾವು ಇದನ್ನೆಲ್ಲ ಪ್ರತಿಜ್ಞಾರೂಪದಲ್ಲಿ ಸ್ವೀಕರಿಸಿ ಪಾಲಿಸಬೇಕು. ಪ್ರತಿವರ್ಷವೂ ನಮ್ಮ ತಪ್ಪುಗಳನ್ನು ಅವಲೋಕಿಸಿಕೊಂಡು ಆ ದೇವಿಯ ರೂಪವನ್ನು ಅರ್ಥಮಾಡಿಕೊಂಡು ಬದುಕುವ ನಿರ್ಧಾರಮಾಡಬೇಕು. ದುಷ್ಟರು ಎಂದರೆ ನಮ್ಮೊಳಿಗನ ಕಾಮ, ಕ್ರೋಧ, ಮದ, ಲೋಭ, ಮೋಹ ಮತ್ತು ಮತ್ಸರಗಳು. ಇವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಮುಗ್ಧಮಗುವಿನಂತೆ ಬದುಕಬೇಕು. ಅಂತಹ ಬದುಕನ್ನು ರೂಪಿಸಿಕೊಳ್ಳುವ ಶಕ್ತಿ ಮತ್ತು ಏಕಾಗ್ರತೆಯನ್ನು ನಮ್ಮೆಲ್ಲರಿಗೂ ಈ ಶುಭದಿನದಂದು ಶ್ರೀದೇವಿ ಹರಸಲಿ.

ಮುಂದುವರಿಯುವುದು..

|| ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳವಾಗಿ ಜೀವಿಸಿ||
ವಿಷ್ಣು ಭಟ್ಟ, ಹೊಸ್ಮನೆ.

LEAVE A REPLY

Please enter your comment!
Please enter your name here