Home ನಂಬಿಕೆ ಸುತ್ತಮುತ್ತ ಕಥಾಮಾಲಿಕೆ-೧ ಆತ್ಮನೇತ್ರ ಭಾಗ-೨

ಕಥಾಮಾಲಿಕೆ-೧ ಆತ್ಮನೇತ್ರ ಭಾಗ-೨

2930
0
SHARE

‘ನಾನು ಕೇಳಿದ್ದಕ್ಕೆ ಉತ್ತರಿಸುವುದನ್ನು ಬಿಟ್ಟು, ಮಠದಲ್ಲಿ ಬೇಕಾದಷ್ಟು ಜನರಿದ್ದರೂ ನನ್ನ ಬಳಿ ನೀರು ತರಲು ಹೇಳುತ್ತಿರುವರಲ್ಲ!’ ಎಂದುಕೊಳ್ಳುತ್ತ ಗುರುವಿನ ಬಳಿ ಆಗದು ಎನ್ನಬಾರದು ಎಂದುಕೊಂಡು ತಂಬಿಗೆ ಹಿಡಿದುಕೊಂಡು ಹೊರಟ. ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆಯೇ ಒಂದು ಸಣ್ಣ ಕೆರೆ ಆತನ ಕಣ್ಣಿಗೆ ಬಿತ್ತು. ತನ್ನ ಕೆಲಸ ಬೇಗನೆ ಆಯಿತೆಂಬ ಆನಂದದಿಂದ ನೀರನ್ನು ತುಂಬಿಸಿದ. ನೀರನ್ನು ತುಂಬಿಸಿ ಬಿಂದಿಗೆಯನ್ನು ನೋಡಿದ. ಆ ನೀರು ಕೊಳಕಾಗಿದ್ದುದು ಕಂಡು ಬಂತು. ‘ಈಗ ಏನು ಮಾಡುವುದು?’ ಎಂದು ಆತ ಯೋಚಿಸುತ್ತಿರುವಾಗಲೇ ಸ್ವಲ್ಪ ದೂರದಲ್ಲಿಯೇ ಇನ್ನೊಂದು ಕೆರೆಯನ್ನು ಕಂಡ. ಆಗಲೇ ತುಂಬಿದ ನೀರನ್ನು ಅಲ್ಲಿಯೇ ಚೆಲ್ಲಿ, ಆ ಇನ್ನೊಂದು ಕೆರೆಯತ್ತ ಬಂದ. ಈ ಕೆರೆಯ ನೀರು ಆ ಕೆರೆಗಿಂತಲೂ ಶುದ್ಧವಾಗಿತ್ತಾದರೂ ಪರಿಶುದ್ಧವೆಂಬಂತಿರಲಿಲ್ಲ. ಈಗ ಆತನ ಮನಸ್ಸು ದ್ವಂದ್ವಕ್ಕೊಳಗಾಯಿತು. ಒಂದು ಮನಸ್ಸು ಹೇಳಿತು ‘ಇದೇ ನೀರನ್ನು ತೆಗೆದುಕೊಂಡು ಹೋಗು’ ಎಂಬುದಾಗಿ. ಇನ್ನೊಂದು ಮನಸ್ಸು ಹೇಳಿತು ‘ಬೇಡ, ಇನ್ನೂ ಮುಂದಕ್ಕೆ ಹೋದರೆ ಒಳ್ಳೆಯ ನೀರು ಇರುವ ಕೆರೆ ಸಿಗುತ್ತದೆ. ಅದರಲ್ಲಿ ಇದಕ್ಕಿಂತಲೂ ಉತ್ತಮವಾದ ನೀರು ಸಿಗಬಹುದು’ ಎಂದಿತು. ಕೆಲವು ಹೊತ್ತು ಇದೇ ದ್ವಂದ್ವದಲ್ಲಿಯೇ ಕಳೆದ. ಮೊದಲಿನ ಮನಸ್ಸು ‘ಮುಂದೆ ಕೆರೆಯಿಲ್ಲದೆಯೂ ಇರಬಹುದು. ಇದ್ದರೂ ಒಳ್ಳೆಯ ನೀರು ಸಿಗದೇ ಹೋಗಬಹುದು. ಸುಮ್ಮನೆ ಶ್ರಮವನ್ನೂ ಸಮಯವನ್ನೂ ವ್ಯಯಿಸಬೇಡ’ ಎಂದಿತು. ಇದರಂತೆ ಆತ ನೀರನ್ನು ತುಂಬಿಸಿಕೊಂಡು ಹೊರಟು ಎರಡು ಹೆಜ್ಜೆ ಇಡುತ್ತಿದ್ದಂತೆ ಎರಡನೆಯ ಮನಸ್ಸು ‘ಇಲ್ಲ, ಇದು ಸರಿಯಲ್ಲ. ಈ ನೀರು ಕುಡಿಯಲು ಅಷ್ಟೊಂದು ಯೋಗ್ಯವಲ್ಲ. ಇನ್ನೊಂದು ಪ್ರಯತ್ನವನ್ನು ಮಾಡದೇ ಹೋಗಬೇಡ. ಮತ್ತೊಂದು ಕೆರೆಯು ಸಿಗದೇ ಹೋದರೆ ಮಾತ್ರ ಈ ನೀರನ್ನು ತೆಗೆದುಕೊಂಡು ಹೋಗು. ಈ ನೀರು ಈಗ ಕೈಯಲ್ಲಿಯೇ ಇರಲಿ. ಹಿಂದಕ್ಕೆ ಹೋಗಿ ಕೆರೆಯನ್ನು ಹುಡುಕು’ ಎಂದಿತು. ಈ ಎರಡನೆಯ ಮನಸ್ಸಿನ ಮಾತಿನಂತೆ ಉದ್ಯಾನವನದಲ್ಲಿ ಇನ್ನೊಂದು ಕೆರೆಯನ್ನು ಹುಡುಕಿಕೊಂಡು ಹೋದ. ಕೆಲವು ದೂರ ಕ್ರಮಿಸಿದ ಬಳಿಕ ಉತ್ತಮವಾದ ಕುಡಿಯುವ ನೀರಿನಿಂದ ಕೂಡಿದ ಕೆರೆ ಆತನ ಕಣ್ಣಿಗೆ ಬಿತ್ತು. ಆ ಕೆರೆಯಿಂದ ನೀರನ್ನು ತುಂಬಿಸಿಕೊಂಡು ಬಂದ. ಆತ ಬರುತ್ತಿರುವಾಗ ದೂರದಿಂದಲೇ ಗುರುಗಳು ನೀರನ್ನು ಸೇವಿಸುತ್ತಿದ್ದುದು ಕಂಡುಬಂತು.

“ಗುರುಗಳೇ, ನೀರನ್ನು ತೆಗೆದುಕೊಳ್ಳಿ.”
ಗುರುಗಳು ಸ್ವಲ್ಪ ನೀರನ್ನು ಕುಡಿದು, ತಂಬಿಗೆಯನ್ನು ಬದಿಯಲ್ಲಿಟ್ಟು ಕೇಳಿದರು. “ನಿನಗೆ ನಿನ್ನ ಆತ್ಮಸಿಕ್ಕಿತೇ?”
“ಇಲ್ಲ! ಎಲ್ಲಿದೆ?”
“ನೀನು ನೀರನ್ನು ತರುವಾಗ ಇಂತಹ ಕೆರೆಯ ನೀರನ್ನೇ ತೆಗೆದುಕೊ ಎಂದು ನಿರ್ದೇಶಿಸಿದ್ದೇ ನಿನ್ನ ಆತ್ಮ. ಮನಸ್ಸು ಬೇಡವೆಂದರೂ ಆತ್ಮವು ನಿನಗೆ ಒಳ್ಳೆಯ ಮಾರ್ಗವನ್ನೇ ಅಲ್ಲಿ ಸೂಚಿಸಿತು” ಎಂದು ಗುರುಗಳು ಸಣ್ಣಗೆ ನಕ್ಕರು.
ಆತ್ಮನೇತ್ರನಿಗೆ ಈಗ ತನ್ನ ಹೆಸರೂ, ಆತ್ಮದ ಸ್ವರೂಪವೂ ಅರ್ಥವಾಗಿತ್ತು.

“ಈ ಆತ್ಮವೆಲ್ಲಿರುತ್ತದೆ ಗುರುಗಳೇ?”
“ಆತ್ಮವು ದೂರದಲ್ಲಿದೆ; ಹತ್ತಿರದಲ್ಲಿಯೂ ಇದೆ. ಅದು ಚಲಿಸುತ್ತದೆ; ಚಲಿಸುವುದಿಲ್ಲ. ಅದು ಈ ಪ್ರಪಂಚದ ಹೊರಗೂ ಇದೆ, ಒಳಗೂ ಇದೆ. ಸರ್ವವ್ಯಾಪಿಯಾಗಿದೆ. ಆತ್ಮದ ಅಂತರಂಗವನ್ನು ಅರಿತು ಬದುಕಿದರೆ ಜೀವನವು ಆನಂದಮಯವಾಗಿತ್ತದೆ” ಎಂದರು.

“ಗುರುಗಳೇ, ನಾನು ನೀರನ್ನು ತರುವಾಗ ನೀವು ನೀರುಕುಡಿದದ್ದನ್ನು ಸ್ವಲ್ಪ ದೂರದಲಿದ್ದ ನಾನು ನೋಡಿದೆ. ಆದರೆ ನೀರನ್ನು ಕುಡಿದಾದ ಬಳಿಕವೂ ನೀವು ನಾನು ತಂದ ನೀರನ್ನು ಕುಡಿದಿರಲ್ಲ! ಬಾಯಾರಿಕೆ ಇರದಿದ್ದರೂ ಯಾಕೆ ಕುಡಿದಿರಿ?”
ಗುರುಗಳಿಗೆ ಮತ್ತೆ ನಗುಬಂತು.

“ಹೌದು, ನಾನು ನೀರನ್ನು ಕುಡಿದಾಗಿತ್ತು. ಆದರೆ ನನ್ನ ಆತ್ಮವು ನಿನ್ನ ಆತ್ಮ ಕಷ್ಟಪಟ್ಟು ಆರಿಸಿ ತಂದ ನೀರನ್ನು ಕುಡಿಯದೆ, ನಿನ್ನ ಆತ್ಮವನ್ನು ನೋಯಿಸಲು ಇಷ್ಟಪಡದ ಕಾರಣ ನಾನು ಸ್ವಲ್ಪ ನೀರನ್ನು ಕುಡಿದೆ” ಎಂದರು.

ಗುರುಗಳು ಮಾತು ಮುಂದುವರಿಸುತ್ತಾ “ಆತ್ಮನೇತ್ರ ಆತ್ಮವು ಸರ್ವಾಂತರ್ಯಾಮಿಯಾದುದರಿಂದ ಎಲ್ಲಾ ಕಡೆ, ಎಲ್ಲರಲ್ಲಿಯೂ ಇದೆ. ಇನ್ನೊಂದು ಆತ್ಮವನ್ನು ನೋಯಿಸುವ ಹಕ್ಕು ನಮ್ಮ ಆತ್ಮಕ್ಕಿಲ್ಲ. ಹಾಗಾಗಿ ಆತ್ಮವನ್ನು ಪರಿಶುದ್ಧವಾಗಿಟ್ಟುಕೊಂಡು ಅದರ ಮಾತನ್ನು ಪಾಲಿಸಿದರೆ ನಮ್ಮ ಆತ್ಮ ಪರಮಾತ್ಮವಾಗುತ್ತದೆ.”
ಆತ್ಮನೇತ್ರ ಅಲ್ಲಿಂದ ಹೊರಡುವಾಗ ಆತನ ಆತ್ಮ ಶುದ್ಧವಾಗಿತ್ತು.

ಯಸ್ತು ಸರ್ವಾಣಿ ಭೂತಾನಿ ಆತ್ಮನ್ಯೇವಾನು ಪಶ್ಯತಿ|
ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ ||

ಎಂಬ ಈಶಾವಾಸ್ಯೋಪನಿಷತ್ತಿನ ಶ್ಲೋಕವನ್ನು ಪಠಿಸುತ್ತ ಮನೆಯತ್ತ ಹೆಜ್ಜೆಗಳನ್ನಿಟ್ಟ.

ಮುಗಿಯಿತು.

ವಿಷ್ಣು ಭಟ್, ಹೊಸ್ಮನೆ.

LEAVE A REPLY

Please enter your comment!
Please enter your name here