Home ಧಾರ್ಮಿಕ ಸುದ್ದಿ ಸೋಣ ತಿಂಗಳ ‘ಕುಂಜಾರಮ್ಮನ ಸಂದರ್ಶನ’ದ ಸಂಭ್ರಮ

ಸೋಣ ತಿಂಗಳ ‘ಕುಂಜಾರಮ್ಮನ ಸಂದರ್ಶನ’ದ ಸಂಭ್ರಮ

ಆ.23, ಆ. 30, ಸೆ.6, ಸೆ. 13ರಂದು ವಿಶೇಷ ಸೇವಾ-ಆರಾಧನಾ ದಿನಗಳು

2386
0
SHARE

ಕಟಪಾಡಿ: ಪುರಾಣ,ಇತಿಹಾಸ,ಒಂದಷ್ಟು ಸ್ಥಳೀಯ ಜನಪದರ ನಂಬಿಕೆಗಳೊಂದಿಗೆ ಪ್ರಸಿದ್ಧ ದುರ್ಗಾ ಕ್ಷೇತ್ರವಾದ ಕುಂಜಾರು ಶ್ರೀ ದುರ್ಗಾದೇವಿ ದೇವಸ್ಥಾನದ ಸನ್ನಿಧಾನದಲ್ಲಿ ಆ. 23ರಿಂದ ಸಿಂಹ ಮಾಸದ-ಸೋಣ ಶುಕ್ರವಾರಗಳ ವಿಶೇಷ ಆರಾಧನೆಯು ಪ್ರಾರಂಭಗೊಳ್ಳಲಿದೆ.

ಶ್ರೀ ಅದಮಾರು ಮಠದ ಆಡಳಿತಕ್ಕೊಳಪಟ್ಟಿರುವ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಕರೆನಾಡಿನಲ್ಲಿ ಇರುವ ಶಕ್ತಿ ಆರಾಧನಾ ನೆಲೆಗಳಲ್ಲಿ ಕುಂಜಾರಮ್ಮನ ಸನ್ನಿಧಿ ವಿಶೇಷ ಆಚರಣೆ – ಒಪ್ಪಿಗೆಗಳೊಂದಿಗೆ ಜನಜನಿತವಾದ ಮಾತೃಆರಾಧನಾ ಸನ್ನಿಧಾನವಾಗಿದೆ. ಈ ಬಾರಿಯ ಸಿಂಹ ಮಾಸದ ಆ. 23, ಆ. 30, ಸೆ. 6, ಮತ್ತು ಸೆ. 13ರ ಸೋಣ ಶುಕ್ರವಾರವು ಹೆಚ್ಚು ಭಕ್ತರು ಆಗಮಿಸಿ ತಮ್ಮ ಸೇವೆಯನ್ನು ಸಲ್ಲಿಸಲು ಸುದಿನಗಳಾಗಿವೆ.

ಕುಂಜಾರು ಗಿರಿಯ ಮಹಿಷ ಮರ್ದಿನಿ ದುರ್ಗೆಯನ್ನು ಪರಶುರಾಮರು ಪ್ರತಿಷ್ಠಾಪಿಸಿದರೆಂದು ಐತಿಹ್ಯ. ಉಡುಪಿ ಕೃಷ್ಣನಿಗೂ ಈ ದೇವಿಗೂ ವಿಶಿಷ್ಟವಾದ ನಂಟು.ಕೃಷ್ಣ ದರ್ಶನ ಪಡೆಯುವ ಭಕ್ತರು ಈ ದೇವಿಯ ದರ್ಶನಕ್ಕಾಗಿ ಬರುವುದು ಸಂಪ್ರದಾಯ. ಪರ್ಯಾಯ ಪೀಠ ಏರಲಿರುವ ಶ್ರೀ ಪಾದರು ಕುಂಜಾರು ದೇವಿಯನ್ನು ಸಂದರ್ಶಿಸುವುದು ವಾಡಿಕೆ.

ಆಚಾರ್ಯ ಮಧ್ವರ ಜನ್ಮ ಸ್ಥಳ ಪಾಜಕ ಸಮೀಪದಲ್ಲಿದೆ. ಸುಮಧ್ವ ವಿಜಯದಲ್ಲಿ ಕುಂಜಾರು ಗಿರಿಯನ್ನು ವಿಮಾನಗಿರಿ ಎಂದು ಉಲ್ಲೇಖೀಸಲಾಗಿದೆ. ಶ್ರೀ ವಾದಿರಾಜರ ತೀರ್ಥಪ್ರಬಂಧದಲ್ಲಿ ಕುಂಜಾರು ಗಿರಿಯ ದುರ್ಗೆಯನ್ನು ವರ್ಣಿಸಲಾಗಿದೆ .ಇದನ್ನು ದುರ್ಗಾ ಬೆಟ್ಟ ಎಂದೂ ಹೆಸರಿಸುವುದಿದೆ.

ಮೂಲಸ್ಥಾನ ಚತುರ್ಬಾಹು ದುರ್ಗೆಯು ಕಮಲದ ಮೇಲೆ ನಿಂತಿರುವಳು .ಮಹಿಷ ವಧಾ ಸಂದರ್ಭದ ವಿಶಿಷ್ಟವಾದ ಈ ಶಿಲ್ಪವು ಆಕರ್ಷಕವಾಗಿದೆ. ಕ್ರಿ.ಶ.10-11ನೇ ಶತಮಾನದಷ್ಟು ಪ್ರಾಚೀನತೆಯನ್ನು ಇತಿಹಾಸಕಾರರು ಹೇಳಿದ್ದಾರೆ. ಕುಂಜಾರು ಗಿರಿಯ ಸುತ್ತಲೂ ಪರಶುತೀರ್ಥ, ಗದಾತೀರ್ಥ, ಬಾಣತೀರ್ಥ, ಧನುಸ್‌ ತೀರ್ಥ ಗಳೆಂಬ ನಾಲ್ಕು ತೀರ್ಥಗಳಿವೆ. ಸಿಂಹಮಾಸದ ಅಂದರೆ ”ಸೋಣ” ತಿಂಗಳ ಶುಕ್ರವಾರಗಳಲ್ಲಿ ಬಹುಸಂಖ್ಯೆಯ ಭಕ್ತರು ಕುಂಜಾರಮ್ಮನ ದರ್ಶನಕ್ಕಾಗಿ ಬರುತ್ತಾರೆ. ಪರಿಸರದ ಹತ್ತಾರು ಗ್ರಾಮಗಳ ಆಸ್ತಿಕರಿಗೆ ಸೋಣ ತಿಂಗಳ ”ಕುಂಜಾರಮ್ಮನ ಸಂದರ್ಶನ” ಪರಂಪರೆಯಾಗಿ ರೂಢಿಯಲ್ಲಿದೆ.

ಕುಂಜಾರಮ್ಮನ ವಿಶೇಷ ಸೇವೆಗಳು
ತಮ್ಮ ಪ್ರಾರ್ಥನೆಯ ಈಡೇರಿಕೆಗಾಗಿ ಬಂಗಾರದ ತಾಳಿ, ಮೂಗುತಿ ಸಹಿತ ಹಲವು ಹರಕೆಗಳು ಇಲ್ಲಿ ವಿಶೇಷವಾಗಿ ಸಲ್ಲಿಕೆಯಾಗುತ್ತಿದೆ. ಮಕ್ಕಳು ಮಣ್ಣು ತಿನ್ನುವ ಚಪಲ ಹೋಗಲಾಡಿಸಲು ಬೆಲ್ಲದ ಹರಕೆ ಸಂದಾಯವಾಗುತ್ತದೆ. ಬೆಳ್ಳಿಯ ದೃಷ್ಟಿ, ಸಿಬ್ಬ, ಪಾದದಡಿಯ ಆಣಿ ಮುಂತಾದವು ಸಲ್ಲಿಕೆಯಾಗುತ್ತಿದೆ. ಶ್ರೀ ಸನ್ನಿಧಾನದಲ್ಲಿ ಹೂವಿನ ಪೂಜೆ, ಕುಂಕುಮಾರ್ಚನೆ, ಕಾರ್ತಿಕ ಪೂಜೆಯು ವಿಶೇಷ ಸೇವೆಗಳಾಗಿದೆ.
ಮೀನುಗಾರರ ವಿಶೇಷ ಪ್ರಾರ್ಥನೆಯೂ ಸಮರ್ಪಿತ ಬೆಟ್ಟದಲ್ಲಿರುವ(ವಿಮಾನಗಿರಿ )ಕುಂಜಾರಮ್ಮ ಸಮುದ್ರಕ್ಕೆ ನೇರವಾಗಿ ದರ್ಶನ ನೀಡುವುದರಿಂದ ಕರಾವಳಿಯಾದ್ಯಂತ ಮತ್ಸ್ಯ ಸಂಪತ್ತು ಬೇಡಿಕೆ ಮತ್ತು ತಾಯಿ ಸಂರಕ್ಷಣೆ ಮಾಡಲೆಂಬ ಪ್ರಾರ್ಥನೆಯನ್ನು ಸಲ್ಲಿಸುವ ಮೀನುಗಾರ ಬಾಂಧವರು ಕ್ಷೇತ್ರಕ್ಕಾಗಮಿಸಿ ವಿಶೇಷವಾದ ಸೇವೆ ಸಲ್ಲಿಕೆ ಮಾಡುತ್ತಾರೆ.

ಮೆಟ್ಟಿ ಲು ಏರಿ ಬರುವ ಹರಕೆ
ಕಾಲು, ಕೈ, ಸಂಧುಗಳ ನೋವಿದ್ದವರು ಕಾಲ್ನಡಿಗೆಯ ಮೂಲಕ ಮೆಟ್ಟಿಲು ಹತ್ತಿ ಕ್ಷೇತ್ರದ ಸನ್ನಿಧಾನಕ್ಕೆ ಬರುವ ಹರಕೆಯನ್ನು ಹೊತ್ತವರು ಪಶ್ಚಿಮ ಭಾಗದಲ್ಲಿರುವ 257 ಮೆಟ್ಟಿಲುಗಳನ್ನು ಏರಿಕೊಂಡೇ ಸನ್ನಿಧಾನಕ್ಕೆ ಬರುವುದು ವಿಶೇಷವಾಗಿರುತ್ತದೆ.

18 ಮಾಗಣೆಯ ವ್ಯಾಪ್ತಿಯನ್ನು ಹೊಂದಿರುವ ದುರ್ಗೆಯ ಸನ್ನಿಧಾನಕ್ಕೆ ಸೋಣ ಶುಕ್ರವಾರ ಸರಾಸರಿ ಇಪ್ಪತ್ತೈದು ಸಾವಿರಕ್ಕೂ ಅಧಿಕ ಭಕ್ತಾಧಿಗಳು ಆಗಮಿಸಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಎಂಟರಿಂದ ಹತ್ತು ಸಾವಿರ ಭಕ್ತಾಧಿಗಳು ಕ್ಷೇತ್ರದಲ್ಲಿ ಅನ್ನಪ್ರಸಾದವನ್ನೂ ಸ್ವೀಕರಿಸುತ್ತಾರೆ.ಮಹಿಳೆೆಯರು ಬಳೆಯನ್ನು ಇರಿಸಿಕೊಳ್ಳುವುದೂ ಸ್ಥಳದ ವಿಶೇಷವಾಗಿದೆ. ಶಾಲಾ ಮಕ್ಕಳೂ ಸೋಣ ಶುಕ್ರವಾರವೇ ಪ್ರವಾಸದ ಮೂಲಕ ಆಗಮಿಸಿ ಕ್ಷೇತ್ರ ಸಂದರ್ಶನ ನಡೆಸುತ್ತಾರೆ. ಹೆಚ್ಚಾಗಿ ಗಜಲಕ್ಷ್ಮೀ, ಸಿಂಹವಾಹಿನೀ, ಸರ್ವಾಲಂಕಾರ ಭೂಷಣೆಯಾಗಿ ಮಂಟಪ ಸಹಿತ ಅಲಂಕಾರಗೊಂಡು ಪೂಜಿಸಲ್ಪಡುತ್ತಾಳೆ ಈ ಕುಂಜಾರಮ್ಮ.ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕುರ್ಕಾಲು ಗ್ರಾಮದಲ್ಲಿ ಈ ಕುಂಜಾರಮ್ಮನ ಸನ್ನಿಧಿ ಇದ್ದು, ಬೆಟ್ಟದ ತಪ್ಪಲಿನಲ್ಲಿ ಪಲಿಮಾರುಶ್ರೀಗಳಿಂದ ಪ್ರತಿಷ್ಠೆಗೊಂಡ 32 ಅಡಿ ಎತ್ತರದ ಆಚಾರ್ಯ ಮಧ್ವರ ಏಕಶಿಲಾ ವಿಗ್ರಹವೂ ವಿಶೇಷತೆಯಾಗಿದೆ.

LEAVE A REPLY

Please enter your comment!
Please enter your name here