Home ಧಾರ್ಮಿಕ ಸುದ್ದಿ ಉದ್ಯಾವರ : ಶಂಭುಕಲ್ಲು ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ

ಉದ್ಯಾವರ : ಶಂಭುಕಲ್ಲು ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ

2343
0
SHARE

ಕಟಪಾಡಿ: ಐತಿಹಾಸಿಕ ಮಹತ್ವದ ಉದ್ಯಾವರದ ಶಂಭುಕಲ್ಲಿನ ಮೃತ್ತಿಕೆಯ ಮೂರ್ತಿಗಳಿರುವ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಣ ಶುಕ್ರವಾರಗಳಲ್ಲಿ ವಿಶೇಷ ಪೂಜೆಯು ಸಲ್ಲಿಕೆಯಾಗುತ್ತಿದೆ.

ಜಿಲ್ಲೆಯಲ್ಲಿ ಸಹಜವಾಗಿ ಗುರುತಿಸಲ್ಪಡುವ ದೇವೀ ಶಕ್ತಿಯ ಆರಾಧನಾ ಕೇಂದ್ರವಾಗಿ ವಿಶೇಷವಾಗಿ ಗುರುತಿಸಲಾಗಿದೆ. ಸೋಣ ಶುಕ್ರವಾರದಂದು ಸೋಣಾರತಿ ವಿಶೇಷ. ಅಷ್ಟೋತ್ತರ ಸಹಿತ ಕುಂಕುಮಾರ್ಚನೆ ಸೇವೆಯು ನಡೆಯುತ್ತದೆ. ಸಾರ್ವಜನಿಕ ಹೂವಿನ ಪೂಜೆಯೂ ಈ ಬಾರಿ ಸೆ.8ರಂದು ಜರಗಲಿದ್ದು ವಿಶೇಷವಾಗಿರುತ್ತದೆ.

ಗರ್ಭಗುಡಿಯಲ್ಲಿ ಏಕಾಸನದಲ್ಲಿ ಕುಳಿತಂತೆ ಇರುವ ಮೂರು ಆಳೆತ್ತರದ ಮೃಣ್ಮಯ ಮೂರ್ತಿಗಳು ದ್ವಿಬಾಹುಗಳನ್ನು ಹೊಂದಿದೆ. ಪೂರ್ವಾಭಿಮುಖವಾಗಿರುವ ಈ ಮುರ್ತಿಗಳ ಮುಂಭಾಗದಲ್ಲಿ ನಿಂತಾಗ ಎಡಬದಿಯ ಮೊದಲ ಮೂರ್ತಿಯ ಕೈಯಲ್ಲಿ ಗುರುತಿಸಲಾಗದ ವಿಶೇಷ ಆಯುಧ ಅಥವಾ ಅಲಂಕಾರಿಕ ವಸ್ತುವಿದ್ದರೆ, ಎಡಕೈಯಲ್ಲಿ ಅಮೃತಕಲಶವಿದೆ. ಹಂಸವಾಹಿನಿಯಾಗಿದೆ. ಮಧ್ಯದ ಮೂರ್ತಿಯು ತ್ರಿಶೂಲ ಹಾಗೂ ಡಮರನ್ನು ಎರಡು ಕೈಯಲ್ಲಿ ಧರಿಸಿದಂತಿದ್ದು, ವೃಷಭ ವಾಹನವಾಗಿದೆ. ಬಲಭಾಗದ ಪ್ರತಿಮೆ ಚಕ್ರ, ಶಂಖವನ್ನು ಕೈಗಳಲ್ಲಿ ಹಿಡಿದಿದ್ದು ಗರುಡ ವಾಹನವಾಗಿದೆ ಎಂದು ವಿಶ್ಲೇಷಿಸುವ ಸಂಶೋಧಕರು, ಇತಿಹಾಸಕಾರರು ಕ್ರಿ. ಶ .ಏಳನೇ ಶತಮಾನದಲ್ಲಿ ನಿರ್ಮಿಸಲಾದ ಮೃತ್ತಿಕೆಯ(ಮಣ್ಣಿನ) ಪ್ರತಿಮೆಗಳು ಅಪೂರ್ವವಾದುದು ಎಂದು ಉಲ್ಲೇಖೀಸುತ್ತಾರೆ.

ಈ ಪುರಾತನ ಸನ್ನಿಧಾನವು ಮಾಂಗಲ್ಯ ಭಾಗ್ಯ, ಸಂತಾನ ಪ್ರಾಪ್ತಿಗೆ ಸಿದ್ಧಿ ಕ್ಷೇತ್ರ. ದುಷ್ಟಾರಿಷ್ಟಕ್ಕೆ ಪರಹಾರ, ಇಷ್ಟಾರ್ಥ ಸಿದ್ಧಿ ಇಲ್ಲಿ ಆಗುತ್ತದೆ ಎಂಬುದು ನಂಬಿಕೆ. ಇದರಂತೆ ಬಹು ಸಂಖ್ಯೆಯ ಭಕ್ತರು ಇಲ್ಲಿಗೆ ನಡೆದು ಕೊಳ್ಳುತ್ತಿದ್ದಾರೆ. ಸೋಣದಲ್ಲಿ ದುರ್ಗಾ ದೇವಸ್ಥಾನ ದರ್ಶನವು ವಾಡಿಕೆಯಾಗಿದೆ. ಶಂಭುಕಲ್ಲಿನ ಮೃಣ್ಮಯ ದುರ್ಗೆಯರ ಒಂದು ದೇವಸ್ಥಾನದ ಸಂದರ್ಶನದಿಂದ ಮೂರು ಅಮ್ಮನವರನ್ನು ಏಕಕಾಲದಲ್ಲಿ ಕಾಣುವ ಅವಕಾಶವಾಗುತ್ತದೆ.

LEAVE A REPLY

Please enter your comment!
Please enter your name here