ಕಟಪಾಡಿ: ನೂತನವಾಗಿ ಜೀರ್ಣೋದ್ಧಾರಗೊಂಡ ಅಂಕುದ್ರು ಶ್ರೀ ಬಬ್ಬರ್ಯ, ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಗ್ರಾಮಸ್ಥರು ಆರಾಧಿಸಿಕೊಂಡು ಬಂದಿರುವ ದೈವಗಳ ಪ್ರತಿಷ್ಠೆ, ದೈವಸಂದರ್ಶನ ಎ. 23ರಂದು ನೆರವೇರಿತು.
ಉದ್ಯಾವರ ಮಹತೋಭಾರ ಸಿದ್ಧಿವಿನಾಯಕ ದೇವಸ್ಥಾನದ ಅರ್ಚಕ ರಂಗನಾಥ ಭಟ್ ಇವರ ನೇತೃತ್ವದಲ್ಲಿ ಗಣಹೋಮ, ಪ್ರತಿಷ್ಠಾ ಹೋಮ, ಪಂಚ ವಿಂಶತಿ ಕಲಶಾರಾಧನೆ, ಪ್ರಧಾನ
ಹೋಮ, ಕಲಾ ಸಾನ್ನಿಧ್ಯ ಹೋಮ, ಪ್ರಸನ್ನ ಪೂಜೆ ನಡೆದು 11-15ರ ಮಿಥುನ ಲಗ್ನದಲ್ಲಿ ಜೀರ್ಣೋದ್ಧಾರಗೊಂಡ ದೈವಾಲಯದಲ್ಲಿ ಬ್ರಹ್ಮ ಮಹಿಷಾಂತಕ, ಬಬ್ಬರ್ಯ, ಬಬ್ಬುಸ್ವಾಮಿ ಪರಿವಾರ ಸಹಿತ ಸತ್ಯದ ಕಂಬೇರ್ಲು ಹಾಗೂ ಕೊರಗಜ್ಜ ದೈವಗಳ ಪ್ರತಿಷ್ಠೆ , ದರ್ಶನ ಜರಗಿತು.
ಕ್ಷೇತ್ರದ ಅರ್ಚಕರು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಪಠೇಲರ ಮನೆ ಯತಿರಾಜ್ ಶೆಟ್ಟಿ, ಅಧ್ಯಕ್ಷ ಮಿಥೇಶ್ ಸುವರ್ಣ ಮೂಡುಮನೆ ಕುಟುಂಬಸ್ಥರು, ಉಪಾಧ್ಯಕ್ಷ ಪ್ರಭಾಕರ ಕೋಟ್ಯಾನ್ ಪಡುಮನೆ ಕುಟುಂಬಸ್ಥರು, ಕಾರ್ಯದರ್ಶಿ ಬಾಲಕೃಷ್ಣ, ಕೋಶಾಧಿಕಾರಿ ತಿಲಕ್ರಾಜ್, ಜಿತೇಂದ್ರ ಶೆಟ್ಟಿ ಉದ್ಯಾವರ, ವಿಜಯ ಬಂಗೇರ, ವಿಜಯ ಉಪ್ಪುಗುಡ್ಡೆ, ಸುಕುಮಾರ್, ದಿನೇಶ್ ಉಪ್ಪುಗುಡ್ಡೆ, ಬೊಮ್ಮು ಗುರಿಕಾರ ಮೊದಲಾದವರು ಉಪಸ್ಥಿತರಿದ್ದರು.