Home ಧಾರ್ಮಿಕ ಸುದ್ದಿ ಕಾಸರಗೋಡು: ಮಹಿಳಾ ಸಂಘಟನೆಗಳಿಂದ ‘ಮಾತೃ ಕೀರ್ತನ’

ಕಾಸರಗೋಡು: ಮಹಿಳಾ ಸಂಘಟನೆಗಳಿಂದ ‘ಮಾತೃ ಕೀರ್ತನ’

1534
0
SHARE

ಯಾವುದೇ ದಾಖಲೆ ಮಾಡುವುದಕ್ಕಾಗಲಿ, ಮುರಿಯುವುದಕ್ಕಾಗಲಿ ಅಲ್ಲದೆ ಕೇವಲ ಭವರೋಗಕ್ಕೆ ಭಗವತ್‌ ನಾಮ ಸ್ಮರಣೆಯೇ ಮದ್ದು ಎಂಬ ಭಾವನೆಯಿಂದ ದೇವಸ್ಥಾನಗಳ ಕಟ್ಟೆಗಳ ಮೇಲೆ ಭಜನೆಯ ತಂಡಗಳು ಹುಟ್ಟಿಕೊಂಡು, ಕಟ್ಟಿಕೊಂಡು ಅಹೋರಾತ್ರಿ ಭಜನೆ, ಭಜನ ಸಪ್ತಾಹ ಹಾಗೂ ಭಜನ ಮಾಸಗಳನ್ನು ನಡೆಸುತ್ತಿದ್ದವು. ಎಡೆಬಿಡದೆ ವಿವಿಧ ತಂಡಗಳು ಪರವೂರುಗಳಿಂದ ಬಂದು ಭಜನ ಕಾರ್ಯಕ್ರಮದಲ್ಲಿ ಹಾಡಿ ಕೃತಾರ್ಥ ಭಾವನೆ ಪಡೆದುಕೊಳ್ಳುತ್ತಿದ್ದವು.

ಆದರೆ ಇತ್ತೀಚಿನ ದಿನಗಳಲ್ಲಿ ತನ್ನ ಉಳಿವಿನ ಉಪಾಯವನ್ನು ಆಶ್ಚರ್ಯಕರ ರೀತಿಯಲ್ಲಿ ಭಜನೆ ಕಂಡುಕೊಂಡಿದ್ದು, ಅಲ್ಲಲ್ಲಿ ಭಜನಾ ತರಗತಿಗಳು ಹಾಗೂ ತಂಡಗಳ ಮುಖಾಂತರ ಈಗ ಮಹಿಳಾ ತಂಡಗಳು ಬಹಳ ವ್ಯವಸ್ಥಿತವಾಗಿ ಶಿಸ್ತು ಬದ್ಧವಾಗಿ ಮಕ್ಕಳನ್ನು ಸಹ ಸೇರಿಸಿಕೊಂಡು ಭಜನೆ ಹಾಡುತ್ತಿವೆ. ಹತ್ತಿಪ್ಪತ್ತು ಸದಸ್ಯರು ಒಂದೇ ರೀತಿಯ ಸೀರೆಗಳನ್ನು ಉಟ್ಟು ಸರಿಹೊಂದುವ ಅಲಂಕಾರಗಳನ್ನು ಮಾಡಿಕೊಂಡು ತಾಳ ತಂಬೂರಿ ಹಿಡಿದು ಊರೂರುಗಳಿಗೆ ಹೋಗುವಷ್ಟು ಆತ್ಮವಿಶ್ವಾಸ, ಐಕ್ಯಮತ್ಯ ಸಾಧಿಸಿದ್ದು ಹೊಸ ಪ್ರಗತಿ ಎನ್ನಬಹುದು. ಹನ್ನೆರಡನೇ ಶತಮಾನದಲ್ಲಿ ನಡೆದ ಭಕ್ತಿಕ್ರಾಂತಿಯ ಕಂಪನಗಳು ಇಂದಿಗೂ ಭಜನೆಗಳ, ವಚನಗಳ ಮೂಲಕ ತನುಮನಗಳಿಗೆ ವ್ಯಾಪಿಸುವುದನ್ನು ಕಂಡಾಗ ಇಂತಹ ಹೊಸ ಬೆಳವಣಿಗೆ ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರಶಂಸನೀಯವೆನಿಸುತ್ತದೆ.

ಈ ನಿಟ್ಟಿನಲ್ಲಿ ಇತ್ತೀಚಿಗೆ ಕಾಸರಗೋಡಿನ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ‘ಮಾತೃ ಕೀರ್ತನಾ’ ಕಾರ್ಯಕ್ರಮ ಸ್ತುತ್ಯರ್ಹ. ಅಲ್ಲಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಳಕಳಿಯ ಸಂಸ್ಥೆಯಾದ ‘ರಂಗಚಿನ್ನಾರಿ’ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದನ್ನು ಸಂಘಟಿಸಿತ್ತು. ರಾಮಕೃಷ್ಣ ಕಾಟುಕುಕ್ಕೆ ಮತ್ತು ಜಯಾನಂದ ಕುಮಾರ್‌ ಹೊಸದುರ್ಗ ಇವರ ನೇತೃತ್ವದಲ್ಲಿ ಕಾಸರಗೋಡು, ಕಾಂಞಗಾಡ್‌, ಮಂಗಳೂರು, ಪುತ್ತೂರು ಮುಂತಾದ
ಕಡೆಗಳಿಂದ ಬಂದ 35 ತಂಡಗಳ ಸುಮಾರು 500 ಮಹಿಳೆಯರು ದಾಸ ಸಂಕೀರ್ತನೆಯನ್ನು ಅಲ್ಲಿ ಹಾಡಿದರು. ಬೆಳಗ್ಗಿನಿಂದ ಅಪರಾಹ್ನದವರೆಗೆ ಭಜನೆ ನಡೆದರೆ ಮತ್ತೆ ಸಂಶೋಧಕಿ ಹಾಗೂ ಬರಹಗಾರ್ತಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಉಪನ್ಯಾಸ ನೀಡಿದರು. ಕೊನೆಗೆ ಭಜನೆಗಳನ್ನು ಹಾಡುವ ವಿಧಾನದ ಬಗ್ಗೆ ಖ್ಯಾತಗಾಯಕ ಶಂಕರ್‌ ಶ್ಯಾನುಭೋಗ್‌ ಪ್ರಾತ್ಯಕ್ಷಿಕೆ ನೀಡಿದರು.

ಕಾರ್ಯಕ್ರಮಕ್ಕಾಗಿ ವಿವಿಧ ಊರುಗಳಿಂದ ತಮ್ಮ ಸಮವಸ್ತ್ರಗಳಲ್ಲಿ ಲಗುಬಗೆಯಿಂದ ಬಂದಿಳಿದ ಮಹಿಳಾಮಣಿಗಳು ಬೆರೆತು ಕಲೆತು ದಿನ ಕಳೆದರು. ವೇದಿಕೆ ಏರಿ ತಮ್ಮ ಸ್ಥಾನಗಳಲ್ಲಿ ಕುಳಿತು ಶ್ರದ್ಧಾಪೂರ್ವಕವಾಗಿ ಹಾಡಿದ್ದು ಕಂಡಾಗ ಮಹಿಳೆಯರಿಗೆ ಅವರ ಅಸ್ಮಿತೆಯನ್ನು ಉಳಿಸಿಕೊಳ್ಳುವುದರಲ್ಲಿ ಯಾವ ನಿರ್ಬಂಧವೂ ಲೆಕ್ಕವೇ ಅಲ್ಲ ಎನ್ನಿಸಿತು. ಕೊಟ್ಟ ಅವಕಾಶವನ್ನು ಉಪಯೋಗಪಡಿಸಿಕೊಂಡು ತಮ್ಮ ಒಗ್ಗಟ್ಟನ್ನು ಪ್ರತಿಭೆಯನ್ನು ಮೆರೆಸಬೇಕೆಂಬ ಹಂಬಲ ಎಲ್ಲರಲ್ಲಿಯೂ ಇತ್ತು. ಇಲ್ಲಿ ನಡೆದದ್ದು ಸ್ಪರ್ಧೆಯೇನೂ ಅಲ್ಲ. ಆದರೆ ಹಿತವಾದ ಸ್ಪರ್ಧಾ ಮನೋಭಾವದಿಂದಾಗಿ ಕಾರ್ಯಕ್ರಮ ಮೆರಗು ಪಡೆದು ಕೊಂಡಿತ್ತು. ಮಾತೆಯರ ಭಜನೆಗೆ ಸತ್ಯನಾರಾಯಣ ಐಲ, ಜಗನ್ನಾಥ ಶೆಣೈ, ಪುರುಷೋತ್ತಮ ಕೊಪ್ಪಲ್‌ ಹಾರ್ಮೋನಿಯಂ ಮತ್ತು ಸುಜೀರ ಗಿರೀಶ್‌ ನಾಯಕ್‌ ಹಾಗೂ ಸಂತೋಷ ಶೆಣೈ ತಬ್ಲಾ ಸಾಥ್‌ ನೀಡಿದರು. ಚೇತೋಹಾರಿಯಾದ ನಿರೂಪಣೆ ಕಾರ್ಯಕ್ರಮವನ್ನು ಇನ್ನಷ್ಟು ಚಂದವಾಗಿಸಿತು.

ಒಂದೇ ವೇದಿಕೆಯಲ್ಲಿ ಅರ್ಧ ಸಹಸ್ರ ಮಹಿಳೆಯರನ್ನು ಹಾಡಿಸಿದ ಸಂತೋಷದಿಂದ ಕಾರ್ಯಕ್ರಮದ ಸೂತ್ರಧಾರಿ ಕಾಸರಗೋಡು ಚಿನ್ನಾ ‘ಮಾತೆಯರಲ್ಲಿ ಜೀವ ಶಕ್ತಿ ಅಡಗಿದೆ. ಮುಗ್ಧವಾಗಿ ಹರಿಯುತ್ತಿರುವ ಅವರ ಅಸ್ಮಿತೆಗೊಂದು ಅವಕಾಶ ಕೊಡಲೇಬೇಕು. ಈ ಕಾರ್ಯಕ್ರಮ ಯಶಸ್ವಿಯಾಗುವುದೆಂದು ತಿಳಿದೇ ಇದನ್ನು ಆಯೋಜಿಸಲಾಗಿದೆ. ನನಗಂತೂ ಮಾತೃ ಶಕ್ತಿಯಲ್ಲಿ ಎಂದೆಂದಿಗೂ ಭರವಸೆ ಇದೆ’ ಎಂದರು. ಬೆಸೆಂಟ್‌ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಕಾರ್ಯಕ್ರಮವನ್ನು
ಉದ್ಘಾಟಿಸುತ್ತಾ ಸಮಾಜ ಕಟ್ಟುವ ಹಾಗೂ ಸಂಪ್ರದಾಯಗಳ ಅಂಕು-ಡೊಂಕು ತಿದ್ದುವ ಕೆಲಸ ದಾಸವರೇಣ್ಯರು ಕೀರ್ತನೆಗಳ ಮುಖಾಂತರ ಮಾಡಿದರು. ಅವರಿಂದ ಪಡೆದ ಈ ಸಾಹಿತ್ಯ ಸಂಪತ್ತು ಇಂದಿಗೂ ನಮ್ಮ ಸಂಸ್ಕೃತಿಯ ಜೀವಾಳವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ವರದರಾಜ ವೆಂಕಟರಮಣ ದೇಗುಲದ ಆಡಳಿತ ಮೊಕ್ತೇಸರ ಭಾಸ್ಕರ್‌ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಖ್ಯಾತಗಾಯಕ ಶಂಕರ್‌ ಶ್ಯಾನ್‌ಭೋಗ್‌ ಮುಖ್ಯ ಅತಿಥಿಯಾಗಿದ್ದರು. ಕಾಸರಗೋಡು ನಗರಸಭಾ ಮಾಜಿ ಸದಸ್ಯ ವಿದ್ಯಾಕರ ಮಲ್ಯ, ರಂಗಚಿನ್ನಾರಿಯ ನಿರ್ದೇಶಕ ಕೆ. ಸತ್ಯನಾರಾಯಣ, ಮನೋಹರ ಶೆಟ್ಟಿ ಉಪಸ್ಥಿತರಿದ್ದರು. ಅಪರೂಪದ ಹಾಗೂ ದಾಖಲಾರ್ಹ ಕಾರ್ಯಕ್ರಮವಾಗಿ ‘ಮಾತೃ ಕೀರ್ತನಾ’ ಮೂಡಿಬಂತು.

ನವವಿಧ ಭಕ್ತಿಯಲ್ಲಿ ಭಜನೆ-ಸಂಕೀರ್ತನೆಗೆ ಮಹತ್ವದ ಸ್ಥಾನ ಉಂಟು. ದಾಸತ್ವದ ಭಾವದಿಂದ ಮಾಡುವ ಭಗವಂತನ ಗುಣಗಾನವೇ ಇದರ ಸಾರವಾದರೂ ಸಾಮಾಜಿಕವಾಗಿ ಭಜನೆಯಿಂದು ಸಾಮುದಾಯಿಕ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಮನೆಯಲ್ಲಿ ಮಕ್ಕಳು ಮರಿಗಳು ಸಂಜೆ ಹೊತ್ತು ಕುಳಿತು ಭಜನೆ ಮಾಡುವುದು ಒಂದು ಕಾಲದಲ್ಲಿದ್ದ ಸಂಪ್ರದಾಯ. ಯಾವುದೇ ವ್ಯತ್ಯಾಸವಿಲ್ಲದೆ ಎಲ್ಲೆಡೆ ಧಾರಾವಾಹಿಗಳೇ ಮೊಳಗುತ್ತಿರುವ ಇಂದಿನ ಸಂಧ್ಯಾಕಾಲಗಳಲ್ಲಿ ಭಜನೆ ಕೇವಲ ವಯಸ್ಸಾದವರ ಪ್ರವೃತ್ತಿಯಾಗಿ ಉಳಿದುಕೊಂಡಿದೆ. ಕೆಲವು ಸಮುದಾಯಗಳಲ್ಲಿ ಜನಪದ ಸಂಸ್ಕೃತಿಯ ಭಾಗವೇ ಆಗಿರುವಷ್ಟು ಪ್ರಚಲಿತವಾಗಿದ್ದ ಭಜನಾ ಪ್ರಕಾರ ಇಂದು ವಿವಿಧ ಮಾಧ್ಯಮಗಳ ಮೇಲಾಟದಿಂದ ಹಿನ್ನಡೆ ಅನುಭವಿಸುತ್ತಿದೆ.

– ಸ್ಮಿತಾ ಶೆಣೈ

LEAVE A REPLY

Please enter your comment!
Please enter your name here