ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ 15 ಅಡಿ ಎತ್ತರದ ಸಂತ ಲಾರೆನ್ಸ್ ಶಿಲಾವಿಗ್ರಹವನ್ನು ಜ. 19ರಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೋ ಅನಾವರಣಗೊಳಿಸಿದರು.
ಸಹಾಯಕ ಧರ್ಮಗುರು ವಂ| ರೋಯ್ ಲೋಬೋ, ಅತ್ತೂರು ಬಸಿಲಿಕಾದ ನಿರ್ದೇಶಕ ವಂ| ಜಾರ್ಜ್ ಡಿ’ಸೊಜಾ, ಉಡುಪಿಯ ಧರ್ಮಗುರು ವಂ| ಸ್ಟೀಫನ್ ಡಿ’ಸೋಜಾ, ಜೋನ್ ಗ್ಲ್ಯಾಡಿಸ್ ಡಿ’ಸಿಲ್ವಾ ಉಪಸ್ಥಿತರಿದ್ದರು.
32 ಅಡಿಯ ಸ್ತಂಭ ಹಾಗೂ 15 ಅಡಿ ಎತ್ತರವಿರುವ ಈ ಏಕಶಿಲಾ ಪ್ರತಿಮೆಯನ್ನು ಕುಂಟಲ್ಪಾಡಿ ದಿ| ಲೀನಾ ಡಿ’ಸಿಲ್ವಾ ಅವರ ಸ್ಮರಣಾರ್ಥ ಅವರ ಕುಟುಂಬಸ್ಥರು ನಿರ್ಮಿಸಿದ್ದರು.
ಜ. 26ರಿಂದ 30ರವರೆಗೆ ಅತ್ತೂರು ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿರುವ ಸಾಂತ್ಮಾರಿ ನಡೆಯಲಿರುವ ಹಿನ್ನೆಲೆಯಲ್ಲಿ ರವಿವಾರ ನವದಿನಗಳ ಪ್ರಾರ್ಥನಾ ಮುಹೂರ್ತ ಜರಗಿತು. ಶಾಸಕ ವಿ. ಸುನಿಲ್ ಕುಮಾರ್, ವಿವಿಧ ಕ್ಷೇತ್ರದ ಜನಪ್ರತಿನಿಧಿ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.