ಕಾರ್ಕಳ: ಒಳ್ಳೆಯತನ ಮೈಗೂಡಿಸಿಕೊಂಡಲ್ಲಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಉಡುಪಿ ಬಿಷಪ್ ಡಾ| ಜೆರಾಲ್ಡ್ ಲೋಬೋ ಅಭಿಪ್ರಾಯಪಟ್ಟರು.
ಅವರು ಜ. 29ರಂದು ಸಂತ ಲಾರೆನ್ಸ್ ಅತ್ತೂರು ಬಸಿಲಿಕಾದ ನಾಲ್ಕನೇ ದಿನ ಬಲಿಪೂಜೆ ನೆರವೇರಿಸಿ ಸಂದೇಶ ನೀಡಿದರು.ಭಗವಂತ ಮನುಷ್ಯನನ್ನು ಒಳ್ಳೆಯತನಕ್ಕಾಗಿ ಸೃಷ್ಟಿಸಿದ್ದಾನೆ. ಆದರೆ, ಮನುಷ್ಯ ತನ್ನ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ಕೆಲ ಸಂದರ್ಭ ಕೆಟ್ಟತನವನ್ನು ಆಲಂಗಿಸಿಕೊಳ್ಳುತ್ತಾನೆ ಎಂದವರು ಹೇಳಿದರು.
ಬುಧವಾರದಂದು ಪುಣ್ಯಕ್ಷೇತ್ರದಲ್ಲಿ ಹನ್ನೊಂದು ಬಲಿಪೂಜೆಗಳು ನೆರವೇರಿದವು. ಈ ಸಂದರ್ಭ ಸಾವಿರಾರು ಭಕ್ತಾದಿಗಳು ನೆರೆದಿದ್ದರು.
ದಿನದ ಹಬ್ಬದ ವಿಶೇಷ ಬಲಿಪೂಜೆಯನ್ನು ಉಡುಪಿಯ ಧರ್ಮಾಧ್ಯಕ್ಷರಾದ ಜೆರಾಲ್ಡ್ ಲೋಬೋ ಕೊಂಕಣಿ ಭಾಷೆಯಲ್ಲಿ, ಹಾಗೂ ಬೆಳ್ತಂಗಡಿಯ ಧರ್ಮಾಧ್ಯಕ್ಷ ಲಾರೆನ್ಸ್ ಮುಕ್ಕುಝಿ ಕನ್ನಡ ಭಾಷೆಯಲ್ಲಿ ನೆರವೇರಿಸಿದರು. ಬಳಿಕ ದೈಹಿಕ ಹಾಗೂ ಮಾನಸಿಕ ಅಸ್ವಸ್ಥರಿಗಾಗಿ ವಿಶೇಷ ಪ್ರಾರ್ಥನೆ ನಡೆಸಿಕೊಟ್ಟರು.
ಕರ್ನಾಟಕದಾದ್ಯಂತದಿಂದ ಸುಮಾರು 350ಕ್ಕೂ ಮಿಕ್ಕಿದ ಧರ್ಮಗುರುಗಳು ಹಾಗೂ ಸೇವಾದರ್ಶಿಗಳು ಮಹೋತ್ಸವದ ಐದು ದಿನಗಳಲ್ಲು ಭಕ್ತಾದಿಗಳ ಆಧ್ಯಾತ್ಮಿಕ ಸೇವೆಯಲ್ಲಿ ತಮ್ಮನ್ನೇ ತೊಡಗಿಸಿಕೊಂಡಿದ್ದರು. 500 ಕ್ಕೂ ಮಿಕ್ಕಿ ಸ್ವಯಂಸೇವಕರು ವಿವಿಧ ವಿಭಾಗಗಳಲ್ಲಿ ಸಕ್ರಿಯವಾಗಿದ್ದು ಮಹೋತ್ಸವ ಸುಸೂತ್ರವಾಗಿ ನಡೆಯುವಲ್ಲಿ ಸಹಕರಿಸಿದ್ದರು.
ಮಿಯ್ನಾರಿನ ವಂ| ಜೇಸನ್ ಡಿ’ಸೋಜಾ, ಪೆರಂಪಳ್ಳಿಯ ವಂ| ಅನಿಲ್ ಡಿ’ಕೋಸ್ಟಾ, ಬೈಂದೂರಿನ ವಂ| ವಿನ್ಸೆಂಟ್ ಕುವೆಲ್ಲೊ, ಮಂಗಳೂರು ಜೆಪ್ಪು ಸೆಮಿನರಿಯ ರೆಕ್ಟರ್ ವಂ| ರೊನಾಲ್ಡ್ ಸೆರಾವೊ, ಉಡುಪಿ ಶೋಕಮಾತಾ ದೇವಾಲಯದ ವಂ| ವಲೇರಿಯನ್ ಮೆಂಡೊನ್ಸಾ, ಗಂಗೊಳ್ಳಿಯ ವಂ| ಅಲ್ಬರ್ಟ್ ಕ್ರಾಸ್ತಾ ಹಾಗೂ ಚಿತ್ರದುರ್ಗ ಹಿರಿಯೂರಿನ ವಂ| ಫ್ರಾಂಕ್ಲಿನ್ ಡಿ’ಸೋಜಾರವರು ಕೊಂಕಣಿ ಭಾಷೆಯಲ್ಲಿ ಬಲಿಪೂಜೆಗಳನ್ನು ನೆರವೇರಿಸಿದರು. ಚಿಕ್ಕಮಗಳೂರಿನ ವಂ| ಡೇವಿಡ್ ಪ್ರಕಾಶ್ ಹಾಗೂ ಶಿವಮೊಗ್ಗದ ವಂ| ಲಾರೆನ್ಸ್ ಡಿ’ಸೋಜಾ ಕನ್ನಡ ಬಲಿಪೂಜೆಗಳನ್ನು ನೆರವೇರಿಸಿ ಭಕ್ತಾದಿಗಳಿಗಾಗಿ ಪ್ರಾರ್ಥಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮಾಜಿ ಶಾಸಕ ರಮಾನಾಥ ರೈ, ಅಭಯಚಂದ್ರ ಜೈನ್ ಭೇಟಿ ನೀಡಿದರು.