ಕಾರ್ಕಳ: ನಾರಾಯಣ ಗುರುಸ್ವಾಮಿಯವರ ತತ್ವ ಸಿದ್ಧಾಂತ, ಆದರ್ಶ ಪರಿಪಾಲನೆ ಮಾಡಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುವುದು. ವೃತ್ತಿ, ಪ್ರವೃತ್ತಿಯಲ್ಲಿ ಸತ್ಯ, ನಿಷ್ಠೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಬಲ್ಯೋಟು ಶ್ರೀ ಗುರು ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.
ಆ. 15ರಂದು ಆನೆಕೆರೆ ಶ್ರೀ ಕೃಷ್ಣಮಂದಿರದಲ್ಲಿ ಮಂಗಳೂರು ಶ್ರೀ ನಾರಾಯಣ ಗುರು ವೈದಿಕ ಸಮಿತಿ ವತಿಯಿಂದ ನಡೆದ ಯಜುರುಪಾಕರ್ಮ ಗುರುವಂದನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆನೆಕೆರೆ ಶ್ರೀ ಕೃಷ್ಣಮಂದಿರದ ಆಡಳಿತ ಮೊಕ್ತೇಸರ ಭಾಸ್ಕರ್ ಎಸ್. ಕೋಟ್ಯಾನ್ ಆರ್ಥಿಕವಾಗಿ ಸದೃಢರಾಗಬೇಕೆಂಬ ಏಕೈಕ ಉದ್ದೇಶವಿಟ್ಟುಕೊಂಡು ವೈದಿಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಾರದು. ಭಕ್ತರು ನೆಮ್ಮದಿಗಾಗಿ ಪೂಜೆ ಮಾಡಿಸುತ್ತಾರೆ. ಅರ್ಚಕರು ಆಚಾರ ವಿಚಾರಗಳಿಂದ ಕ್ಷೇತ್ರದ ಸಾನ್ನಿಧ್ಯ ವೃದ್ಧಿಯಾಗುವುದು ಎಂದರು.
ಮಂಗಳೂರು ಶ್ರೀ ನಾರಾಯಣ ಗುರು ವೈದಿಕ ಸಮಿತಿಯ ಅಧ್ಯಕ್ಷ ಸೋಮನಾಥ ಶಾಂತಿ ಅಧ್ಯಕ್ಷತೆ ವಹಿಸಿದ್ದರು.
ಬನ್ನಂಜೆ ಬಾಬು ಅಮೀನ್ ಧಾರ್ಮಿಕ ಉಪನ್ಯಾಸ ನೀಡಿದರು.
ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಆರ್. ರಾಜು, ಮೂಡಬಿದ್ರಿ ಬಿಲ್ಲವ ಮುಖಂಡ ರಾಜು ಪೂಜಾರಿ, ಸದಾನಂದ ಶಾಂತಿ ಕಾರ್ಕಳ, ವಿಶ್ವನಾಥ ಶಾಂತಿ, ಬನ್ನಂಜೆ ಕೇಶವ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೇಶವ ಶಾಂತಿ ಸ್ವಾಗತಿಸಿದರು. ಹರೀಶ್ ಶಾಂತಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.