Home ಧಾರ್ಮಿಕ ಸುದ್ದಿ ಅತ್ತೂರು ವಾರ್ಷಿಕ ಮಹೋತ್ಸವ: ಮೂರನೇ ದಿನದ ಕಾರ್ಯಕ್ರಮ

ಅತ್ತೂರು ವಾರ್ಷಿಕ ಮಹೋತ್ಸವ: ಮೂರನೇ ದಿನದ ಕಾರ್ಯಕ್ರಮ

ಭಕ್ತಾದಿಗಳಿಂದ ಬಲಿಪೂಜೆ, ಹರಕೆ

1147
0
SHARE

ಕಾರ್ಕಳ: ಅತ್ತೂರು ಸಂತ ಲಾರೆನ್ಸ್‌ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ನಿರಂತರವಾಗಿ ಬಲಿಪೂಜೆ ನಡೆಯಿತು. ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಸಂತ ಲಾರೆನ್ಸರಿಗೆ ವಂದನೆ ಸಲ್ಲಿಸಿ ಭಕ್ತಿ ಮೆರೆದರೆ ಇನ್ನೊಂದು ಕಡೆ ಸಂತ ಲಾರೆನ್ಸರ ಪವಾಡಮೂರ್ತಿ ಸ್ಪರ್ಶಿಸಿ ಕೃತಾರ್ಥರಾಗುತ್ತಿರುವುದು ಕಂಡುಬಂತು.

ಪವಾಡಮೂರ್ತಿ ಇದ್ದ ಜಾಗದಲ್ಲಿ ಜನತೆ ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿತ್ತು. ಪವಿತ್ರ ಪುಷ್ಕರಿಣಿಯ ನೀರು ಪಡೆದು ಭಕ್ತರು ಪುನೀತರಾಗುತ್ತಿದ್ದರು. ಪುತ್ತೂರಿನ ಧರ್ಮಾಧ್ಯಕ್ಷ ಡಾ| ಜೀವರ್ಗಿಸ್‌ ಮಾರ್‌ ಮಕಾರಿಯೊಸ್‌ ಕಲಯಿಲ್‌ ಅವರು ಹಾಗೂ ಶಿವಮೊಗ್ಗದ ಧರ್ಮಾಧ್ಯಕ್ಷ ಡಾ| ಫ್ರಾನ್ಸಿಸ್‌ ಸೆರಾವೊವರು ದಿನದ ವಿಶೇಷ ಪೂಜೆಗಳನ್ನು ಕನ್ನಡ ಭಾಷೆಯಲ್ಲಿ ನೆರವೇರಿಸಿದರು. ಎಂದಿನಂತೆ ಅಸ್ವಸ್ಥರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ನಡೆಸಿದ್ದಲ್ಲದೆ, ಗುರುಗಳು ಹಾಗೂ ಸೇವಾದರ್ಶಿಗಳು ಸಕಲ ಭಕ್ತಾದಿಗಳ ಶಿರದ ಮೇಲೆ ಹಸ್ತವಿಟ್ಟು ಆಶೀರ್ವದಿಸಿದರು.

ಮಂಗಳವಾರದಂದು ಧರ್ಮಾಧ್ಯಕ್ಷರ ಕನ್ನಡ ಬಲಿಪೂಜೆಗಳ ಹೊರತಾಗಿ, ಕಲ್ಯಾಣಪುರದ ವಂ| ಕೆನ್ಯೂಟ್‌ ನೊರೋನ್ಹಾ, ತಲ್ಲೂರಿನ ವಂ| ಜೊನ್‌ ಮೆಂಡೊನ್ಸ, ಸಂತೆಕಟ್ಟೆಯ ವಂ| ಲೆಸ್ಲಿ ಡಿ’ಸೋಜಾ, ಪೆರಂಪಳ್ಳಿಯ ವಂ| ಅನಿಲ್‌ ಡಿ’ಸೋಜಾ, ಪಿಲಾರಿನ ವಂ| ವಿಶಾಲ್‌ ಲೋಬೊ, ಶಂಕರಪುರದ ವಂ| ಫ‌ರ್ಡಿನಾಂಡ್‌ ಗೊನ್ಸಾಲ್ವಿಸ್‌ ಹಾಗೂ ಕುಂದಾಪುರದ ವಂ| ವಿಜಯ್‌ ಡಿ’ಸೋಜಾ ಅವರು ಕೊಂಕಣಿ ಭಾಷೆಯಲ್ಲಿ ಬಲಿಪೂಜೆಗಳನ್ನು ನೆರವೇರಿಸಿದರು. ಶಿವಮೊಗ್ಗದ ಕಬಳೆಯ ವಂ| ರಿಚರ್ಡ್‌ ಪಾಯಸ್‌ ಹಾಗೂ ಹಾಸನದ ವಂ| ಮೈಕರಿ ಮರಿ ಇವರು ಕನ್ನಡ ಬಲಿಪೂಜೆಗಳನ್ನು ನೆರವೇರಿಸಿ ಭಕ್ತಾದಿಗಳಿಗಾಗಿ ಪ್ರಾರ್ಥಿಸಿದರು.

ಗಣ್ಯರ ಭೇಟಿ
ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಕುಟುಂಬ ಸಮೇತ ಪುಣ್ಯಕ್ಷೇತ್ರಕ್ಕೆ ಭೇಟಿಯಿತ್ತು ಬಲಿಪೂಜೆಯಲ್ಲಿ ಪಾಲ್ಗೊಂಡರು. ಮಾಜಿ ಸಚಿವರಾದ ವಿನಯಕುಮಾರ್‌ ಸೊರಕೆ ಹಾಗೂ ಪ್ರಮೋದ್‌ ಮಧ್ವರಾಜ್‌ ಅವರು ಸಂತ ಲಾರೆನ್ಸರಿಗೆ ಮೇಣದ ಬತ್ತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.

ಪಳ್ಳಿ: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ವಾರ್ಷಿಕ ಮಹೋತ್ಸವವು ಮೂರನೇ ದಿನ ವಿಜೃಂಭಣೆಯಿಂದ ನಡೆಯಿತು. ಹಗಲಲ್ಲಿ ಭಕ್ತಾದಿಗಳು ಬಲಿಪೂಜೆಗಳಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ 7.30ಕ್ಕೆ ಕೊಂಕಣಿ ಭಾಷೆಯಲ್ಲಿ ಬಲಿ ಪೂಜೆಯನ್ನು ಮಿಲಾಗ್ರಿಸ್‌ನ ಕತೆದ್ರಾಲಿನ ಫಾ| ಕ್ಯಾನುಟ್‌ ನೊರೊನ್ಹ ನೆರವೇರಿಸಿದರು. ಬಳಿಕ 9.00 ಕ್ಕೆ ತಲ್ಲೂರಿನ ಫಾ| ಜಾನ್‌ ಮೆಂಡೊನ್ಸ್‌ ಕೊಂಕಣಿಯಲ್ಲಿ ವಿಶೇಷ ಬಲಿಪೂಜೆ ನೆರವೇರಿಸಿದರು. ಮಧ್ಯಾಹ್ನ 12ಕ್ಕೆ ಮೌಂಟ್‌ ರೋಥರಿಯಾ ಫಾ| ಲೆಸ್ಲಿಲಿ ಕೊಂಕಣಿಯಲ್ಲಿ ಬಲಿಪೂಜೆ ನೆರವೇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಎಣ್ಣೆ ಪ್ರಸಾದ
ಅತ್ತೂರು ಸಂತ ಲಾರೆನ್ಸ್‌ ಪುಣ್ಯಕ್ಷೇತ್ರದಲ್ಲಿ ಎಣ್ಣೆಯನ್ನು ಪ್ರಸಾದ ರೂಪದಲ್ಲಿ ನೀಡುವುದು ವಿಶೇಷ.
ಚರ್ಚ್‌ ಆವರಣದಲ್ಲಿ ಕಂಚಿನ ಪಾತ್ರೆಯನ್ನು ಇಡಲಾಗಿದ್ದು ಇದರಲ್ಲಿ ಭಕ್ತರು ಹರಕೆ ರೂಪದಲ್ಲಿ ತುಪ್ಪ, ಎಳ್ಳೆಣ್ಣೆ, ತೆಂಗಿನ ಎಣ್ಣೆ ಮುಂತಾದ ದ್ರವ್ಯಗಳನ್ನು ಅದರಲ್ಲಿ ಸುರಿಯುತ್ತಾರೆ. ಹಿಂದೆ ಕರಾವಳಿ ಭಾಗದ ರೈತರು ತಾವು ಬೆಳೆದ ಫ‌ಸಲು ಉತ್ತಮವಾಗಿ ಬೆಳೆದರೆ ಅತ್ತೂರಿಗೆ ಮುಂತಾದ ದ್ರವ್ಯಗಳನ್ನು ನೀಡುವುದಾಗಿ ಹರಕೆ ಹೊರುತ್ತಿದ್ದರು. ಅದು ಈಡೇರಿದಲ್ಲಿ ಜಾತ್ರೆ ಸಂದರ್ಭ ತಮ್ಮ ಹರಕೆಯನ್ನು ನೆರವೇರಿಸುತ್ತಿರುವುದು ಸಂಪ್ರದಾಯ. ಆ ಬಳಿಕ ಅಲ್ಲಿ ಸಂಗ್ರಹವಾದ ದ್ರವ್ಯಗಳನ್ನು ಭಕ್ತಾದಿಗಳು ನೋವು, ಚರ್ಮರೋಗ ನಿವಾರಣೆಗಾಗಿ ಹಚ್ಚಲು ಅಲ್ಲಿಂದ ಸಂಗ್ರಹಿಸುವುದು ಸಂಪ್ರದಾಯವಾಗಿದೆ. ಇಲ್ಲಿ ಈ ತರಹದ ವಿಶೇಷವಾದ ಹರಕೆಗಳಲ್ಲಿ ಒಂದಾದಿದೆ.

ಮೇಣದ ದೀಪ
ಭಕ್ತರು ಸಂತಾನ ಪ್ರಾಪ್ತಿಗಾಗಿ ಹೆಚ್ಚು ಮೇಣದ ದೀಪವನ್ನು ಹರಕೆ ಹೇಳುವುದು ವಾಡಿಕೆಯಾಗಿದ್ದು, ಇದರ ಜತೆಗೆ ಭಕ್ತರು ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು ಹಾರೈಸಿಯು ಮೇಣದ ದೀಪವನ್ನು ಹರಕೆಯಾಗಿ ನೀಡುತ್ತಾರೆ. ವ್ಯಕ್ತಿಯಷ್ಟೇ ಉದ್ದದ ಮೇಣದ ದೀಪದ ಹರಕೆ ಇಲ್ಲಿ ವಿಶಿಷ್ಟವಾದ ಹರಕೆಯಾಗಿದೆ.

ಪುಷ್ಕರಣಿ ಕೆರೆ
ಅತ್ತೂರು ಚರ್ಚ್‌ನಲ್ಲಿರುವ ಕೆರೆಯಲ್ಲಿ ಭಕ್ತರು ನೀರನ್ನು ನೀರನ್ನು ಸಂಪ್ರೋಕ್ಷಿಸಿದಲ್ಲಿ ಚರ್ಮರೋಗ, ಹುಣ್ಣು ಮೊದಲಾದ ಕಾಯಿಲೆಗಳು ವಾಸಿಯಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಈ ನಿಟ್ಟಿನಲ್ಲಿ ಭಕ್ತರು ಕರೆಯ ನೀರನ್ನು ತೀರ್ಥವಾಗಿ ಉಪಯೋಗಿಸುತ್ತಾರೆ.

ಅತ್ತೂರು ಸಂತ ಲಾರೆನ್ಸ್‌ ಚರ್ಚ್‌ನಲ್ಲಿ ಇರಿಸಲಾದ ಪವಾಡ ಮೂರ್ತಿಯನ್ನು ಜಾತ್ರೆ ಸಂದರ್ಭ ಮುಕ್ತವಾಗಿ ಪ್ರಾರ್ಥಿಸಲು ಅವಕಾಶ ಕಲ್ಪಿಸಲಾಗಿದ್ದು, ಪ್ರತೀ ದಿನ ಅಪಾರ ಸಂಖ್ಯೆಯಲ್ಲಿ ಭಕ್ತರು ಪವಾಡ ಮೂರ್ತಿಯ ದರ್ಶನ ಪಡೆಯುತ್ತಾರೆ.

ಸ್ವಚ್ಛತಾ ವ್ಯವಸ್ಥೆ
ನಿಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಎಸ್‌ ಎಲ್‌ ಆರ್‌ಎಂ ಘಟಕದ ಸಿಬಂದಿ ಸ್ವಚ್ಛತೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಅಚ್ಚುಕಟ್ಟಾಗಿ ವ್ಯವಸ್ಥೆಯನ್ನು ಕೈಗೊಂಡಿದ್ದಾರೆ. ಇದಕ್ಕೆ ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದು, ಕಸ ಹಾಗೂ ತ್ಯಾಜ್ಯಗಳನ್ನು ಹಾಕಲಾದ ಸ್ಥಳಗಳಲ್ಲೇ ಹಾಕುತ್ತಿದ್ದು, ದಿನ ನಿತ್ಯ ವಿಲೇವಾರಿ ಮಾಡುವ ಮೂಲಕ ಸ್ವತ್ಛತೆಗೆ ವಿಶೇಷ ಪ್ರಾಶಸ್ತ್ಯವನ್ನು ಸ್ಥಳೀಯಾಡಳಿತ ಕೈಗೊಂಡಿದೆ.

ವ್ಯವಸ್ಥಿತ ಪಾರ್ಕಿಂಗ್‌ ಸೌಲಭ್ಯ
ದ್ವಿಚಕ್ರ, ತ್ರಿಚಕ್ರ ಹಾಗೂ ಕಾರುಗಳ ಪಾರ್ಕಿಂಗ್‌ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಸ್ವಯಂಸೇವಕರು ಯಶಸ್ವಿಯಾಗಿದ್ದಾರೆ. ವಿಶಾಲವಾದ ಪಾರ್ಕಿಂಗ್‌ ಸೌಲಭ್ಯವಿದ್ದು ಯಾವುದೇ ರಸ್ತೆ ತಡೆಯಾಗದಂತೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಅಂಗಡಿ ಮಳಿಗೆಗಳು
ಮಾರುಕಟ್ಟೆ ಅಬ್ಬರ ಜಾಸ್ತಿಯಾಗಿದ್ದು ರಸ್ತೆಯುದ್ದಕ್ಕೂ ಅಂಗಡಿ ಮಳಿಗೆಗಳ ಸ್ಟಾಲ್‌ಗ‌ಳಿದ್ದು ನೂರಾರು ವಿವಿಧ ಮಳಿಗೆಗಳು ಸಾರ್ವಜನಿಕರು ಕೈ ಬೀಸಿ ಕರೆಯುವಂತಿದೆ. ಸಿಹಿ ತಿಂಡಿಗಳ ಅಂಗಡಿ ಮಳಿಗೆಗಳಲ್ಲಂತೂ ಜನಸಂದಣಿ ಜಾಸ್ತಿಯಾಗಿತ್ತು.

LEAVE A REPLY

Please enter your comment!
Please enter your name here