ಕಾರ್ಕಳ: ಸರ್ವಧರ್ಮ ಸಮನ್ವಯ ಕೇಂದ್ರ ಅತ್ತೂರಿನ ವಾರ್ಷಿಕ ಮಹೋತ್ಸವ ಜ. 30ರಂದು ಸಂಪನ್ನಗೊಂಡಿತು. ಜ. 26ರಿಂದ ಪ್ರಾರಂಭಗೊಂಡು 5 ದಿನಗಳ ಕಾಲ ಸಾಂತ್ ಮಾರಿ ಹಬ್ಬ ವಿಜೃಂಭಣೆಯಿಂದ ನಡೆದಿದ್ದು, ಈ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಕೃತಾರ್ಥರಾದರು.
ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಪೀಟರ್ ಪಾವ್É ಸಲ್ಡಾನ್ಹಾ ಅವರು ಮಾರ್ಗದರ್ಶಿ ಮಾತೆಯ ಸಂಭ್ರಮದ ಪೂಜೆ ನೆರವೇರಿಸುವುದರೊಂದಿಗೆ ಐದು ದಿನಗಳ ಮಹೋತ್ಸವಕ್ಕೆ ತೆರೆ ಬಿದ್ದಿತು.
ಹತ್ತು ಬಲಿಪೂಜೆ
ಅಂತಿಮ ದಿನದಂದು ಪುಣ್ಯಕ್ಷೇತ್ರದಲ್ಲಿ ಹತ್ತು ಬಲಿಪೂಜೆಗಳು ನೆರವೇರಿದವು. ಮಹೋತ್ಸವದ ಅಂತಿಮ ಬಲಿಪೂಜೆಯು ರಾತ್ರಿ 9.30 ಗಂಟೆಗೆ ನೆರವೇರಿತು. ಧರ್ಮಗುರುಗಳು ಭಕ್ತಾದಿಗಳಿಗೆ ಪಾಪ ನಿವೇದನೆಯ ಸಂಸ್ಕಾರವನ್ನು ನೀಡಿ, ಆಶೀರ್ವದಿಸಿದರು. ಸೇವಾದರ್ಶಿಗಳು ಅಸ್ವಸ್ಥರ ಶಿರದ ಮೇಲೆ ಹಸ್ತಗಳನ್ನಿಟ್ಟು ಪ್ರಾರ್ಥಿಸುತ್ತಿರುವುದು ಕಂಡುಬಂತು.
ಅಂತಿಮ ದಿನದಂದು ಮಂಗಳೂರಿನ ಧರ್ಮಾಧ್ಯಕ್ಷರ ಹಬ್ಬದ ಬಲಿಪೂಜೆಯ ಹೊರತಾಗಿ, ಬ್ರಹ್ಮಾವರದ ವಂ| ವಿಕ್ಟರ್ ಫೆರ್ನಾಂಡಿಸ್, ಮಂಗಳೂರು ರೊಸಾರಿಯೊ ಚರ್ಚಿನ ವಂ| ಜೆ.ಬಿ. ಕ್ರಾಸ್ತಾ, ವಂ| ವಾಲ್ಟರ್ ಡಿಮೆಲ್ಲೊ, ವಂ| ಮ್ಯಾಕ್ಷಿಮ್ ನೊರೊನ್ಹಾ, ಉಡುಪಿ ಧರ್ಮಪ್ರಾಂತದ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವಂ| ವಿನ್ಸೆಂಟ್ ಕ್ರಾಸ್ತ ಹಾಗೂ ಉಜ್ವಾಡ್ ಕೊಂಕಣಿ ಪತ್ರಿಕೆಯ ಸಂಪಾದಕ ವಂ| ರೊಯ್ಸನ್ ಫೆರ್ನಾಂಡಿಸ್ ಕೊಂಕಣಿ ಭಾಷೆಯಲ್ಲಿ ಬಲಿಪೂಜೆ ನೆರವೇರಿಸಿದರು. ಚಿಕ್ಕಮಗಳೂರಿನ ವಂ| ಫ್ರೆಡರಿಕ್ ಪಾಯ್ಸ, ಬಸರೀಕಟ್ಟೆಯ ವಂ| ವಿನ್ಸೆಂಟ್ ಡಿಸೋಜಾ ಹಾಗೂ ಸಾಗರದ ವಂ| ಎಫ್ರೆಮ್ ಡಯಾಸ್ ಕನ್ನಡ ಬಲಿಪೂಜೆಗಳನ್ನು ನೆರವೇರಿಸಿ ಭಕ್ತಾದಿಗಳಿಗಾಗಿ ಪ್ರಾರ್ಥಿಸಿದರು.
ಸ್ವಚ್ಛತೆಗೆ ಆದ್ಯತೆ
ಅತ್ತೂರು ಬಳಿಯ ಪರಿಸರ ಸ್ವತ್ಛಗೊಳಿಸುವ ನಿಟ್ಟೆ ನಿಟ್ಟೆ ಗ್ರಾಮ ಪಂಚಾಯತ್ ವಿಶೇಷ ಮುತುವರ್ಜಿ ವಹಿಸಿತ್ತು. ಸುಮಾರು 25 ಮಂದಿ 5 ದಿನಗಳ ಕಾಲ ಸ್ವತ್ಛತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ 2 ಗಂಟೆಯ ಅನಂತರ ಚರ್ಚ್ ವಠಾರದಲ್ಲಿ ಜನ ವಿರಳವಾಗುವುದರಿಂದ 2 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಸ್ವತ್ಛತಾ ಸಿಬಂದಿ ಕಾರ್ಯನಿರ್ವಹಿಸುತಿದ್ದರು.
ಅಮ್ಯೂಸ್ಮೆಂಟ್
ಈ ಬಾರಿ ಅಮ್ಯೂಸ್ಮೆಂಟ್ ಪಾರ್ಕ್ ಎಲ್ಲರ ಗಮನ ಸೆಳೆಯುತ್ತಿತ್ತು. ಮಕ್ಕಳ ಅಚ್ಚುಮೆಚ್ಚಿನ ಡ್ರಾಗನ್ ಬೋಟ್, ವಾಟರ್ ಬೋಟ್, ಏರ್ ಮಿಕ್ಕಿ ಮೌಸ್ ಅಲ್ಲಿತ್ತು. ಬೃಹದಾಕಾರದ ಜಾಯಿಂಟ್ ವ್ಹೀಲ್ ಆಕರ್ಷಣೀಯವಾಗಿತ್ತು.
493 ಸ್ಟಾಲ್
ನಿಟ್ಟೆ ಗ್ರಾಮ ಪಂಚಾಯತ್ ಅತ್ತೂರು ಬಳಿ 10 ಅಡಿಯಂತೆ ಸುಮಾರು 493 ಸ್ಟಾಲ್ಗಳನ್ನು ನೀಡಿದೆ. ಸ್ಟಾಲ್ ಏಲಂನಿಂದ ಸುಮಾರು 74 ಲಕ್ಷ ರೂ. ಪಂಚಾಯತ್ಗೆ ಸಂದಾಯವಾಗಿದೆ.