ಕಾರ್ಕಳ: ಸಂತ ಲಾರೆನ್ಸ್ ಮೈನರ್ ಬಸಿಲಿಕಾ ಅತ್ತೂರು ಇದರ ಘೋಷಣೆ ಮತ್ತು ಸಮರ್ಪಣೆಯ ಮೂರನೇ ವರ್ಷದ ವಾರ್ಷಿಕೋತ್ಸವವು ಆ. 1ರಂದು ಸಂಭ್ರಮದಿಂದ ನಡೆಯಿತು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾ ಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೋ ಬಲಿಪೂಜೆ ಸಮರ್ಪಿಸಿ, ಅತ್ತೂರು ಬಸಿಲಿಕಾ ಉಡುಪಿ ಧರ್ಮಪ್ರಾಂತ್ಯಕ್ಕೆ ಒಂದು ಆಶೀರ್ವಾದವಿದ್ದಂತೆ. ಇಲ್ಲಿಗಾಗಮಿಸುವ ಭಕ್ತರು ತಮ್ಮ ಕಷ್ಟ, ಕಾರ್ಪಣ್ಯಗಳನ್ನು ಹೊತ್ತು ತರುತ್ತಾರೆ. ಅವರ ಕಷ್ಟ ಸಂಕಷ್ಟಗಳನ್ನು ಸಂತ ಲಾರೆನ್ಸರು ನಿವಾರಿಸುತ್ತಾರೆ ಎಂದರು.
ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾದರ್ ಚೇತನ್ ಕಪುಚಿನ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲೂ ಆಯ್ಕೆಗಳಿಗೆ ಅವಕಾಶವಿದ್ದು, ನಾವು ಉತ್ತಮವಾಗಿರುವುದನ್ನೇ ಆಯ್ಕೆ ಮಾಡಿಕೊಂಡಲ್ಲಿ ನೆಮ್ಮದಿ ಜೀವನ ನಡೆಸ ಬಹುದೆಂದರು.
ಬಲಿಪೂಜೆಯಲ್ಲಿ ಸಂತ ಲಾರೆನ್ಸ್ ಮೈನರ್ ಬಸಿಲಿಕಾದ ರೆಕ್ಟರ್ ಫಾ| ಜಾರ್ಜ್ ಡಿ’ಸೋಜಾ, ಸಹಾಯಕ ಧರ್ಮಗುರುಗಳಾದ ಫಾದರ್ ರೋಯ್ ಲೋಬೋ, ಫಾದರ್ ಸುನೀಲ್ ಡಿ’ಸಿಲ್ವ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಜಾನ್ ಡಿ’ಸಿಲ್ವ ಕಾರ್ಯದರ್ಶಿ ಲೀನಾ ಡಿ’ಸಿಲ್ವ ಉಪಸ್ಥಿತರಿದ್ದರು.
ಆ. 10ರಂದು ಸಂತ ಲಾರೆನ್ಸರ ಹಬ್ಬ
ಸಂತ ಲಾರೆನ್ಸರ ಹಬ್ಬ ಆ. 10ರಂದು ಅತ್ತೂರಿನಲ್ಲಿ ಬಹಳ ವಿಜೃಂಭಣೆಯಿಂದ ಜರಗಲಿದ್ದು, ಇದರ ಪೂರ್ವಭಾವಿಯಾಗಿ ಪ್ರತಿದಿನ ವಿವಿಧ ಧರ್ಮಗುರುಗಳ ಪ್ರವಚನಗಳೊಂದಿಗೆ ನೊವೇನಾ ಪ್ರಾರ್ಥನೆ ನಡೆಯಲಿದೆ.