Home ಧಾರ್ಮಿಕ ಸುದ್ದಿ ಆನೆಕೆರೆ ಚತುರ್ಮುಖ ಬಸದಿ ಜೀರ್ಣೋದ್ಧಾರ

ಆನೆಕೆರೆ ಚತುರ್ಮುಖ ಬಸದಿ ಜೀರ್ಣೋದ್ಧಾರ

2.50 ಕೋಟಿ ರೂ. ವೆಚ್ಚದ ಯೋಜನೆ ; ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ

1228
0
SHARE

ಕಾರ್ಕಳ: ಐದು ಶತಮಾನಗಳಷ್ಟು ಪ್ರಾಚೀನ, ಐವರು ತೀರ್ಥಂಕರರ ದಿವ್ಯ ಬಿಂಬಗಳಿಂದ ಕೂಡಿರುವ ಆನೆಕೆರೆ ಬಸದಿ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದೆ.

ಕಾರ್ಕಳ ನಗರದಲ್ಲಿ ಸುಮಾರು 24.66 ಎಕ್ರೆ ವಿಸ್ತೀರ್ಣದ ಆನೆಕೆರೆ ಸರೋವರ ಮಧ್ಯದಲ್ಲಿರುವ ಈ ಬಸದಿಯು ಸರ್ವಧರ್ಮೀಯರ ಪುಣ್ಯಕ್ಷೇತ್ರ, ಪ್ರಸಿದ್ಧ ಪ್ರವಾಸಿ ತಾಣವೂ ಹೌದು. ಚತುರ್ಮುಖ ಬಸದಿಯ ವಾಸ್ತು ಶೈಲಿಯನ್ನೇ ಹೊಂದಿರುವ ಕೆರೆ ಬಸದಿಯನ್ನು ಭೈರವ ಅರಸು ವಂಶದ ಪಾಂಡ್ಯನಾಥ ಪಾಂಡ್ಯಪ್ಪೆಡೆಯ ಕಟ್ಟಿಸಿದ ಎಂಬ ಐತಿಹ್ಯವಿದೆ.

ಚತುರ್ಮುಖ ಕೆರೆ ಬಸದಿ
1545ರಲ್ಲಿ ನಿರ್ಮಿಸಿದ ಈ ಬಸದಿಯಲ್ಲಿ ಪೂರ್ವಾಭಿ ಮುಖವಾಗಿ ಭಗವಾನ್‌ ಶ್ರೀ ಆದಿನಾಥ ಸ್ವಾಮಿ, ಪಶ್ಚಿಮಾಭಿಮುಖವಾಗಿ ಶ್ರೀ ಶಾಂತಿನಾಥ ಸ್ವಾಮಿ, ದಕ್ಷಿಣಾಭಿಮುಖವಾಗಿ ಶ್ರೀ ಚಂದ್ರಪ್ರಭ ಸ್ವಾಮಿ, ಉತ್ತರಾಭಿಮುಖವಾಗಿ ಶ್ರೀ ಮಹಾವೀರ ಸ್ವಾಮಿ ಹಾಗೂ ಮೇಗಿನ ನೆಲೆಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಯ ಪ್ರತಿಮೆ ಪ್ರತಿಷ್ಠಾಪಿಸಲಾಗಿದ್ದು, ನಿತ್ಯ ಪೂಜೆ ನೆರವೇರುತ್ತಿದೆ.

ಪೂರ್ವಭಾವಿ ಪ್ರಕ್ರಿಯೆ
ಜೀರ್ಣೋದ್ಧಾರ ಕಾರ್ಯಕ್ಕೆ ಪೂರ್ವಭಾವಿಯಾಗಿ ಕಲ್ಕುಡ ದೈವದ ಮತ್ತು ಪಂಜುರ್ಲಿ ದೈವದ ಪುನರ್‌ಪ್ರತಿಷ್ಠೆ ಕಾರ್ಯ ಪ್ರಗತಿ ಯಲ್ಲಿದೆ. ಬಸದಿ ಸುತ್ತು ಕಲ್ಲಿನ ಆವರಣ ಗೋಡೆ ನಿರ್ಮಾಣ ವಾಗುತ್ತಿದೆ. ಮುಂದಿನ ಒಂದೂ ವರೆ ವರ್ಷದೊಳಗಡೆ ಕಾಮಗಾರಿ ಮುಗಿದು ಪಂಚಕಲ್ಯಾಣ ನಡೆಸುವ ಉದ್ದೇಶ ಹೊಂದಲಾಗಿದೆ.

ಆನೆಕೆರೆ ಹೆಸರು
ಅರಮನೆಯ ಆನೆಗಳಿಗೆ ನೀರು ಕುಡಿಸಲು ಮತ್ತು ಸ್ನಾನ ಮಾಡಿಸಲು ನಿರ್ಮಿಸಿದ ಈ ಕೆರೆಗೆ ಕ್ರಮೇಣ ಆನೆಕೆರೆ ಎಂಬ ಹೆಸರು ಬಂದಿತೆನ್ನಲಾಗಿದೆ. ಆನೆಕೆರೆ ಪಕ್ಷಿಧಾಮವಾಗಿ ಅಭಿವೃದ್ಧಿಗೊಳ್ಳಬೇಕು. ಬೋಟಿಂಗ್‌ ವ್ಯವಸ್ಥೆ ಕಲ್ಪಿಸಿ, ಇಲ್ಲಿಗಾಗಮಿಸುವ ಭಕ್ತರು ಮತ್ತು ಪ್ರವಾಸಿಗರು ಸಂಭ್ರಮಿಸುವಂತೆ ಆಹ್ಲಾದಕರ ವಾತಾವರಣ ನಿರ್ಮಿಸಿಕೊಡಬೇಕೆಂಬ ಬೇಡಿಕೆ ದಶಕಗಳದ್ದು.

ಜೀರ್ಣೋದ್ಧಾರ ಸಮಿತಿ
ಕಾರ್ಕಳ ಜೈನ ಮಠಾಧೀಶರಾದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮಿಯವರ ನೇತೃತ್ವ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಜೀಣೊìದ್ಧಾರ ಸಮಿತಿ ಅಧ್ಯಕ್ಷರಾಗಿ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಗೌರವ ಸಲಹೆಗಾರರಾಗಿ ಕೆ. ರತ್ನಾಕರ್‌ ರಾಜ್‌, ಕೆ. ಅಭಯಚಂದ್ರ ಜೈನ್‌ ಮೂಡಬಿದ್ರೆ, ಎಂ.ಕೆ. ವಿಜಯ ಕುಮಾರ್‌ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೂಲ ಸ್ವರೂಪಕ್ಕೆ ಧಕ್ಕೆಯಾಗದಿರಲಿ
ಅತ್ಯಂತ ಪುರಾತನ ಹಾಗೂ ಆಕರ್ಷಣೀಯ ವಾಗಿರುವ ಆನೆಕೆರೆ ಬಸದಿ ಮೂಲಸ್ವರೂಪಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಅಭಿವೃದ್ಧಿಪಡಿಸಬೇಕು. ಸುಂದರ ಆನೆಕೆರೆ ಬಸದಿಯ ಗತವೈಭವ ಮುಂದಿನ ಜನಾಂಗವೂ ಕಣ್ತುಂಬಿಕೊಳ್ಳುವಂತಿರಲಿ ಎಂಬ ಆಶಯವೂ ಇದೆ.

2.50 ಕೋ.ರೂ. ವೆಚ್ಚ
ಸುಮಾರು 2.50 ಕೋ.ರೂ. ವೆಚ್ಚದಲ್ಲಿ ಆನೆಕೆರೆ ಬಸದಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಬಸದಿ ಜೀರ್ಣೋದ್ಧಾರ ಕಾರ್ಯಕ್ಕೆ ಸರಕಾರದಿಂದ 50 ಲಕ್ಷ ರೂ. ಅನುದಾನ ಒದಗಿಸಿಕೊಡುವುದಾಗಿ ಶಾಸಕ ವಿ. ಸುನಿಲ್‌ ಕುಮಾರ್‌ ಭರವಸೆ ನೀಡಿದ್ದಾರೆ. ಉಳಿದಂತೆ ಸಂಘ-ಸಂಸ್ಥೆಗಳ, ಸರ್ವರ ಸಹಕಾರ, ದೇಣಿಗೆಯೊಂದಿಗೆ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ.

ಪ್ರವಾಸಿ ತಾಣವಾಗಿ ಅಭಿವೃದ್ಧಿ
ಆನೆಕೆರೆ ಸುತ್ತ 2.60 ಕೋಟಿ ರೂ. ವೆಚ್ಚದಲ್ಲಿ ಸುತ್ತುಪೌಳಿ ಕಾಮಗಾರಿ, ಇಂಟರ್‌ಲಾಕ್‌ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಬಸದಿ ಸುತ್ತಲಿನ ಆನೆಕೆರೆ ಅಭಿವೃದ್ಧಿಗಾಗಿ 7 ಕೋ. ರೂ. ಅನುದಾನ ಬಿಡುಗಡೆಗೊಳಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮುಂದಿನ ಡಿಸೆಂಬರ್‌ ವೇಳೆಗೆ ಕೆರೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡು ಸಂಗೀತ ಕಾರಂಜಿ ಸೇರಿದಂತೆ ಸಕಲ ವ್ಯವಸ್ಥೆ ಒದಗಿಸಲಾಗುವುದು.
-ವಿ. ಸುನಿಲ್‌ ಕುಮಾರ್‌,ಶಾಸಕರು

ಕಾರ್ಕಳದ ಹೆಮ್ಮೆ
ಆನೆಕೆರೆ ಬಸದಿ ಕಾರ್ಕಳದ ಹೆಮ್ಮೆ. 2.50 ಕೋ. ರೂ. ವೆಚ್ಚದಲ್ಲಿ ಬಸದಿ ಜೀರ್ಣೋದ್ಧಾರ ಕಾರ್ಯವಾಗುತ್ತಿದ್ದು, ಈ ಒಂದು ಪುಣ್ಯ ಕಾರ್ಯದಲ್ಲಿ ಸರ್ವರೂ ತೊಡಗಿಸಿಕೊಂಡು ಸಹಕಾರ ನೀಡುವಂತೆ ವಿನಂತಿಸುತ್ತಿದ್ದೇವೆ.
-ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು

LEAVE A REPLY

Please enter your comment!
Please enter your name here