ಕಾಪು : ಸಂಸ್ಕಾರಯುತ ಶಿಕ್ಷಣ ಇಂದು ಸಮಾಜಕ್ಕೆ ಅತೀ ಅಗತ್ಯ, ಈ ನಿಟ್ಟಿನಲ್ಲಿ ಮಠ, ದೇವಸ್ಥಾನ, ಸಮಾಜ ಇವುಗಳು ಪೂರಕವಾಗಿ ಸ್ಪಂದಿಸಿದಲ್ಲಿ ಶಿಕ್ಷಣದ ಮೂಲಕ ಸಮಗ್ರ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಕಟಪಾಡಿ ಶ್ರೀಮತ್ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.
ಚಾತುರ್ಮಾಸ್ಯ ಪೂರ್ವಭಾವಿಯಾಗಿ ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಆಗಮಿಸಿದ ಅವರು ಶಿಷ್ಯ ವೃಂದದವರಿಗೆ ಆಶೀರ್ವಚನ ನೀಡಿದರು. ಕಟಪಾಡಿ ಆನೆಗುಂದಿ ಮಠದ ಆರಂಭದ ಕಾಲದಲ್ಲಿಯೇ ಕಾಪು ಕ್ಷೇತ್ರವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದು, ಗುರುದೀಕ್ಷಾ ಸಮಯದಿಂದ ಪ್ರಾರಂಭಗೊಂಡು ಎಲ್ಲಾ ಸಂದರ್ಭಗಳಲ್ಲೂ ಪ್ರಥಮ ಸ್ಥಾನವನ್ನು ತನ್ನದಾಗಿಸಿದೆ. ಇಲ್ಲಿನ ಶಿಷ್ಯವೃಂದದ ನಿಷ್ಠೆ ಅಭಿನಂದನೀಯ ಎಂದರು. ಇಲ್ಲಿನ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಗೌ| ಪ್ರ. ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರು, ಕೋಶಾಧಿಕಾರಿ ಬಂಬ್ರಾಣ ಯಜ್ಞೇಶ ಆಚಾರ್ಯ ಮಂಗಳೂರು, ಆನೆಗುಂದಿ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ ನಿಯುಕ್ತ ಅಧ್ಯಕ್ಷ ಟಿ. ಸುಧಾಕರ ಆಚಾರ್ಯ ತ್ರಾಸಿ, ಶ್ರೀ ಮಹಾಸಂಸ್ಥಾನದ ಆಪ್ತ ಸಹಾಯಕ ಐ. ಲೋಲಾಕ್ಷ ಆಚಾರ್ಯ ಕಟಪಾಡಿ, ಜನಾರ್ಧನ ಆಚಾರ್ಯ ಕನ್ಯಾನ ಮಾತನಾಡಿದರು.
ಇಲ್ಲಿನ ಕ್ಷೇತ್ರದ ಎರಡನೇ ಮೊಕ್ತೇಸರ ಗಂಗಾಧರ ಆಚಾರ್ಯ ದಿಂಡಿಬೆಟ್ಟು, ಮೂರನೇ ಮೊಕ್ತೇಸರ ಅಚ್ಯುತ ಆಚಾರ್ಯ, ಸಮಿತಿಯ ಪದಾಧಿಕಾರಿಗಳಾದ ಗೋವಿಂದ ಆಚಾರ್ಯ , ವಾಸುದೇವ ಆಚಾರ್ಯ ಮೂಳೂರು, ರವಿ ಆಚಾರ್ಯ, ಜಯಾ ಆಚಾರ್ಯ, ಗಣೇಶ ಆಚಾರ್ಯ , ಭಾಸ್ಕರ ಪುರೋಹಿತ್ ಭಾಗವಹಿಸಿದ್ದರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಕಾರ್ಯದರ್ಶಿ / ನ್ಯಾಯವಾದಿ ಕೆ.ಎಂ ಗಂಗಾಧರ ಕೊಂಡೆವೂರು ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.