Home ಧಾರ್ಮಿಕ ಕಾರ್ಯಕ್ರಮ ಕಾಪು : ಆಟಿ ಮಾರಿಪೂಜೆಯ ಸಂಭ್ರಮಕ್ಕೆ ಚಾಲನೆ

ಕಾಪು : ಆಟಿ ಮಾರಿಪೂಜೆಯ ಸಂಭ್ರಮಕ್ಕೆ ಚಾಲನೆ

1717
0
SHARE

ಕಾಪು: ಭಾರೀ ಮಳೆಯ ಭೀತಿಯ ನಡುವೆಯೂ ಇಲ್ಲಿನ ಮೂರೂ ಮಾರಿಗುಡಿಗಳಲ್ಲಿ ಏಕಕಾಲದಲ್ಲಿ ನಡೆಯುವ ವರ್ಷಾವಧಿ ಆಟಿ ಮಾರಿಪೂಜೆ (ಆಷಾಢ ತಿಂಗಳ ಮಾರಿಪೂಜೆ) ಗೆ ಸಿದ್ಧತೆ ಪೂರ್ಣಗೊಂಡಿದ್ದು, ಮಂಗಳವಾರ ರಾತ್ರಿ ವೈಭವದ ಚಾಲನೆ ದೊರಕಿದೆ.

ಆಟಿ ಮಾರಿಪೂಜೆಯ ಪ್ರಯುಕ್ತ ಕಾಪು ಹಳೇ ಮಾರಿಗುಡಿ ದೇವಸ್ಥಾನ, ಹೊಸ ಮಾರಿಗುಡಿ ದೇವಸ್ಥಾನ ಮತ್ತು ಮೂರನೇ ಮಾರಿಗುಡಿ (ಕಲ್ಯ) ದೇವಸ್ಥಾನಗಳಲ್ಲಿ ಕರ್ಕಾಟಕ ಸಂಕ್ರಮಣದ ಬಳಿಕದ ಪ್ರಥಮ ಮಂಗಳವಾರ ಕುರಿ (ಬೇಟೆ) ಬಿಟ್ಟು, ಮಾರಿಪೂಜೆಗೆ ಸಂಪ್ರದಾಯ ಬದ್ಧ ಚಾಲನೆ ನೀಡಲಾಗಿತ್ತು.

ಜು. 23ರಂದು ಮಂಗಳವಾರ ರಾತ್ರಿ ಹಳೇ ಮಾರಿಗುಡಿಗೆ ವೆಂಕಟರಮಣ ದೇವಸ್ಥಾನದಿಂದ ಹಾಗೂ ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ದೇವಿಯ ಬಿಂಬವನ್ನು ಮೆರವಣಿಗೆಯ ಮೂಲಕ ತಂದು ಆಟಿ ಮಾರಿಪೂಜೆಗೆ ಚಾಲನೆ ನೀಡಲಾಗುತ್ತದೆ.

ಬಳಿಕ ಮಾರಿಯಮ್ಮ ದೇವಿಯ ಬಿಂಬ ಪ್ರತಿಷ್ಟೆ ನಡೆದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಮಾರಿಪೂಜೆಯ ಸಂಭ್ರಮ ಪ್ರಾರಂಭಗೊಳ್ಳುತ್ತದೆ. ಬುಧವಾರ ಸಂಜೆಯವರೆಗೂ ಮೂರೂ ಮಾರಿಗುಡಿಗಳಲ್ಲಿ ವಿವಿಧ ಧಾರ್ಮಿಕ ಆಚರಣೆಗಳು ನಡೆಯಲಿವೆ.

ಆಟಿ ಮಾರಿಪೂಜೆಯಲ್ಲಿ ಉಡುಪಿ ಮತ್ತು ಮಂಗಳೂರು ಮಾತ್ರವಲ್ಲದೇ ಉತ್ತರ ಕನ್ನಡ, ಘಟ್ಟದ ಪ್ರದೇಶಗಳು, ಕಾಸರಗೋಡು, ಮುಂಬಯಿ ಸಹಿತ ವಿವಿಧೆಡೆಗಳಿಂದಲೂ ಸಾವಿರಾರು ಮಂದಿ ಭಕ್ತಾಧಿಗಳು ಭಾಗವಹಿಸುತ್ತಾರೆ. ವಿವಿಧ ಆಚರಣೆಗಳು ಪೂರ್ಣಗೊಂಡ ಬಳಿಕ ಬುಧವಾರ ಸಂಜೆ ಮಾರಿಯಮ್ಮ ದೇವಿಯ ದರ್ಶನ ನಡೆಸಿ, ಮಾರಿಯಮ್ಮ ದೇವಿಯ ಬಿಂಬವನ್ನು ಗದ್ದುಗೆಯಿಂದ ಕೆಳಗಿಳಿಸಿ ಮಾರಿಪೂಜೆಗೆ ತೆರೆ ಎಳೆಯಲಾಗುತ್ತದೆ.

LEAVE A REPLY

Please enter your comment!
Please enter your name here