Home ಧಾರ್ಮಿಕ ಸುದ್ದಿ ಕಾಪು: ದಂಡತೀರ್ಥದಲ್ಲಿ ತೀರ್ಥಸ್ನಾನಗೈದ ಪರ್ಯಾಯ ಅದಮಾರು ಶ್ರೀ

ಕಾಪು: ದಂಡತೀರ್ಥದಲ್ಲಿ ತೀರ್ಥಸ್ನಾನಗೈದ ಪರ್ಯಾಯ ಅದಮಾರು ಶ್ರೀ

1139
0
SHARE

ಕಾಪು: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಸರ್ವಜ್ಞ ಪೀಠಾರೋಹಣಗೈಯ್ಯುವ ಮುನ್ನ ಸಂಪ್ರದಾಯದಂತೆ ಶನಿವಾರ ಮುಂಜಾನೆ ಉಳಿಯಾರಗೋಳಿ ದಂಡತೀರ್ಥ ಮಠಕ್ಕೆ ಆಗಮಿಸಿದ ಅದಮಾರು ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ದಂಡತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ ಮಾಡಿದರು.

ಶ್ರೀ ಮಧ್ವಾಚಾರ್ಯರ ದಂಡದಿಂದ ಉದಿಸಿದ ಈ ಕೆರೆ ದಂಡತೀರ್ಥವೆಂದೇ ಖ್ಯಾತವಾಗಿದೆ. ಪರ್ಯಾಯ ಶ್ರೀ ಅದಮಾರು ಮಠದ ಆಪ್ತ ವಲಯ ಮತ್ತು ಪರ್ಯಾಯ ಮಹೋತ್ಸವ ಸ್ವಾಗತ ಸಮಿತಿಯ ಪ್ರಮುಖರ ಜೊತೆಗೂಡಿ ಶನಿವಾರ ಮುಂಜಾನೆ 12.50ರ ವೇಳೆಗೆ ಕಾಪು ದಂಡತೀರ್ಥ ಮಠಕ್ಕೆ ಆಗಮಿಸಿದ ಅದಮಾರು ಶ್ರೀಗಳಿಗೆ ದಂಡತೀರ್ಥ ಮಠ ಮತ್ತು ಗ್ರಾಮಸ್ಥರ ವತಿಯಿಂದ ಭವ್ಯ ಸ್ವಾಗತ ಕೋರಲಾಯಿತು. ಬಳಿಕ ವಿವಿಧ ಧಾರ್ಮಿಕ ಆಚರಣೆಗಳನ್ನು ಪೂರೈಸಿಕೊಂಡು ತೀರ್ಥಸ್ನಾನಗೈದರು.

ಬಳಿಕ ಶ್ರೀಗಳು ತಮ್ಮ ಕಮಂಡಲದಲ್ಲಿ ದಂಡತೀರ್ಥವನ್ನು ತುಂಬಿಕೊಂಡು ಪಟ್ಟದ ದೇವರ ಸಹಿತವಾಗಿ ಮಠದ ಕುಂಜಿ ಗೋಪಾಲಕೃಷ್ಣ ದೇವರಿಗೆ ಅರ್ಚನೆ, ಪೂಜೆ ನೆರವೇರಿಸಿದರು. ಬಳಿಕ ಮುಖ್ಯಪ್ರಾಣ ದೇವರಿಗೆ ನಮಿಸಿದರು. ವಿವಿಧ ಸಂಪ್ರದಾಯ ಪಾಲನೆ ಬಳಿಕ ಪರ್ಯಾಯದ ಶೋಭಾಯಾತ್ರೆಗಾಗಿ ಉಡುಪಿ ಜೋಡುಕಟ್ಟೆಗೆ ನಿರ್ಗಮಿಸಿದರು.

ಅದಮಾರು ಪರ್ಯಾಯ ಸ್ವಾಗತ ಸಮಿತಿಯ ಪ್ರೊ| ಎಂ.ಬಿ. ಪುರಾಣಿಕ್‌, ದಂಡತೀರ್ಥ ಮಠದ ಸೀತಾರಾಮ ಭಟ್‌, ಮಠದ ಅರ್ಚಕ ಶ್ರೀನಿವಾಸ ಭಟ್‌ ಮಲ್ಲಾರು, ಸ್ಥಳೀಯ ಪ್ರಮುಖರಾದ ರವಿ ಭಟ್‌ ಮಂದಾರ, ಕೆ. ಲಕ್ಷ್ಮೀಶ ತಂತ್ರಿ, ಶ್ರೀನಿವಾಸ ಸಾಮಗ, ಸೀತಾರಾಮಣ ಶಾಸ್ತ್ರಿ, ರಾಧಾರಮಣ ಶಾಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here