ಅತ್ಯಂತ ಕಾರಣಿಕದ ಕ್ಷೇತ್ರ ಕಾಪು ಪಡು ಗ್ರಾಮದ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವು ಸುಮಾರು 50 ಲ.ರೂ.
ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಜೂ. 19-20ರಂದು ಬ್ರಹ್ಮಕಲಶೋತ್ಸವ ಸಂಭ್ರಮ ಜರಗಲಿದೆ.
ಕಾಪು ಪೊಯ್ಯ ಪೊಡಿಕಲ್ಲ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ಬಲ ಭಾಗದಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಸಾನ್ನಿಧ್ಯದಲ್ಲಿ ಇಟ್ಟ ಆರೂಢ ಪ್ರಶ್ನೆ, ಗರೋಡಿಯಲ್ಲಿಟ್ಟ ಅಷ್ಟಮಂಗಳ ಪ್ರಶ್ನೆ ಹಾಗೂ ಗ್ರಾಮಕ್ಕೆ ಸಂಬಂಧಪಟ್ಟ ಶ್ರೀ ಧೂಮಾವತಿ ದೈವದ ನುಡಿಯಂತೆ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.
ಕಾಪು ಬೈರುಗುತ್ತು ರಮೇಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಕಾಪು ಪಡು ಗ್ರಾಮದ ಹತ್ತು ಸಮಸ್ತರನ್ನು ಒಳಗೊಂಡಂತೆ ಸಭೆ ನಡೆಸಿ, ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡು ಗ್ರಾಮಸ್ಥರು ಮತ್ತು ಪರವೂರ ದಾನಿಗಳ ಸಹಕಾರದೊಂದಿಗೆ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.
ನೂತನ ಶಿಲಾಮಯ ದೇಗುಲ ಸಮರ್ಪಣೆ ಪ್ರಯುಕ್ತ ಜೂ. 19ರಂದು ಬೆಳಗ್ಗೆ ಮೃತ್ಯುಂಜಯ ಹೋಮ, ಸಂಜೆ ವಾಸ್ತು ಹೋಮ, ವಾಸ್ತು ಪೂಜೆ, ಕಲಶಾಧಿವಾಸ ಹೋಮ ನಡೆಯಲಿದೆ. ಜೂ. 20ರಂದು ಬೆಳಗ್ಗೆ 8.00ರಿಂದ
ಪುನರ್ ಪ್ರತಿಷ್ಠೆ, ಪವಮಾನ ಹೋಮ, ಕಲಶಾಭಿಷೇಕ, 10.00ರಿಂದ ಆಶ್ಲೇಷ ಬಲಿ, ನಾಗ ಸಂದರ್ಶನ, ವಟು ಆರಾಧನೆ, ಮಧ್ಯಾಹ್ನ 12.00ರಿಂದ ಪ್ರಸನ್ನಪೂಜೆ, ಅನ್ನಸಂತರ್ಪಣೆ ಜರಗಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಪ್ರಕಟನೆ ತಿಳಿಸಿದೆ.