ಕಾಪು: ಇತಿಹಾಸ ಪ್ರಸಿದ್ಧವಾಗಿರುವ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಏಕ ಕಾಲದಲ್ಲಿ ನಡೆಯುವ ವರ್ಷಾವಧಿ ಆಟಿ ಮಾರಿ ಪೂಜೆ (ಆಷಾಢ ತಿಂಗಳ ಮಾರಿಪೂಜೆ)ಯು ಜು. 23 ಮತ್ತು 24ರಂದು ನಡೆಯಲಿದೆ.
ಕಾಪು ಹಳೇ ಮಾರಿಗುಡಿ ದೇವಸ್ಥಾನ, ಹೊಸ ಮಾರಿಗುಡಿ ದೇವಸ್ಥಾನ ಮತ್ತು ಮೂರನೇ ಮಾರಿಗುಡಿ (ಕಲ್ಯ) ದೇವಸ್ಥಾನಗಳಲ್ಲಿ ಕರ್ಕಾಟಕ ಸಂಕ್ರಮಣದಂದು ಬಂದ ಮಂಗಳವಾರ ಕುರಿ (ಬೇಟೆ) ಬಿಟ್ಟು, ಮುಂದಿನ ಮಂಗಳವಾರ ಸಂಜೆ ಪ್ರಾರಂಭಗೊಂಡು ಬುಧವಾರ ಸಂಜೆಯವರೆಗೆ ಆಟಿ ಮಾರಿಪೂಜೆ ನಡೆಯಲಿದೆ.
ಜು. 23ರಂದು ರಾತ್ರಿ ಕಾಪು ಹಳೇ ಮಾರಿಗುಡಿಗೆ ವೆಂಕಟರಮಣ ದೇವಸ್ಥಾನದಿಂದ ಮತ್ತು ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ದೇವಿಯ ಬಿಂಬವನ್ನು ಮೆರವಣಿಗೆಯ ಮೂಲಕ ತಂದು ಆಟಿ ಮಾರಿಪೂಜೆಗೆ ಚಾಲನೆ ನೀಡಲಾಗುತ್ತದೆ. ಜು. 24ರಂದು ಸಂಜೆ ಮಾರಿಯಮ್ಮ ದೇವಿಯನ್ನು ಗದ್ದುಗೆಯಿಂದ ಕೆಳಗಿಳಿಸುವ ಮೂಲಕ ಮಾರಿಪೂಜೆಗೆ ತೆರೆ ಎಳೆಯಲಾಗುತ್ತದೆ.
ತುಳು ತಿಂಗಳುಗಳಾದ ಆಟಿ, ಜಾರ್ದೆ ಮತ್ತು ಸುಗ್ಗಿ ತಿಂಗಳಲ್ಲಿ ನಡೆಯುವ ಕಾಪುವಿನ ಮಾರಿಪೂಜೆಯು ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿದ್ದು, ಮೂರೂ ಮಾರಿಪೂಜೆಗಳಲ್ಲಿ ಕರಾವಳಿ ಜಿಲ್ಲೆಗಳು ಮಾತ್ರವಲ್ಲದೇ ಉತ್ತರ ಕನ್ನಡ, ಘಟ್ಟದ ಪ್ರದೇಶಗಳು, ಕಾಸರಗೋಡು, ಮುಂಬಯಿ ಸಹಿತ ವಿವಿಧೆಡೆಗಳಿಂದಲೂ ಭಕ್ತರು ಭಾಗವಹಿಸುವುದು ವಿಶೇಷತೆಯಾಗಿದೆ.