Home ಧಾರ್ಮಿಕ ಸುದ್ದಿ ಯತಿಗಳು ಭಕ್ತರ ಒಡನಾಟದಲ್ಲಿ ಇರಬೇಕು: ಕಾಣಿಯೂರು ಶ್ರೀ

ಯತಿಗಳು ಭಕ್ತರ ಒಡನಾಟದಲ್ಲಿ ಇರಬೇಕು: ಕಾಣಿಯೂರು ಶ್ರೀ

1728
0
SHARE

ಪುತ್ತೂರು: ಯತಿಗಳು ನಿರಂತರ ಪರ್ಯ ಟನೆ ಮಾಡುತ್ತಿರಬೇಕು. ಅವರನ್ನು ಪರಿವ್ರಾಜಕರು ಎನ್ನುತ್ತಾರೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ಸ್ವಾಮೀಜಿ ಹೇಳಿದರು. ಸಂಪ್ಯ ಶ್ರೀ ವಿಷ್ಣುಮೂರ್ತಿ ಅನ್ನ ಪೂರ್ಣೇಶ್ವರಿ ಕ್ಷೇತ್ರದಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಯತಿಗಳು ಭಕ್ತರ ಒಡನಾಟದಲ್ಲಿ ಇರಬೇಕು ಎಂಬ ಹಿನ್ನೆಲೆಯಲ್ಲಿ ನಿರಂತರ ಪರ್ಯಟನೆ ಮಾಡಬೇಕು. ಭಕ್ತರ ಜತೆ ಸಂಪರ್ಕದಲ್ಲಿ ಇರಬೇಕು. ಮೊದಲು ಯತಿಗಳು ನಡೆದುಕೊಂಡೇ ಹೋಗುತ್ತಿದ್ದರು. ಈಗ ವಾಹನ ವ್ಯವಸ್ಥೆಯಿದೆ. ಬದಲಾದ ಸ್ಥಿತಿಗೆ ಅನುಗುಣವಾಗಿ ಚಾತುರ್ಮಾಸ ವ್ರತದ ಸಮಯವೂ ನಾಲ್ಕರಿಂದ ಎರಡು ತಿಂಗಳಿಗೆ ಇಳಿದಿದೆ ಎಂದರು.

ಆಕಾಂಕ್ಷೆ ಈಡೇರಿದೆ
ಚಾತುರ್ಮಾಸ ವ್ರತದ ಸಮಯದಲ್ಲಿ ದಿನಕ್ಕೆ ಒಂದು ಆಹಾರವನ್ನು ತ್ಯಜಿಸಬೇಕು ಎಂಬ ನಿಯಮವಿದೆ. ಮಳೆಗಾಲದ ನಾಲ್ಕು ತಿಂಗಳ ಸಮಯದಲ್ಲಿ ಸೂಕ್ಷ್ಮಾಣು ಸಹಿತ ವಿವಿಧ ರೀತಿಯ ಜೀವಿಗಳು ಓಡಾಡುತ್ತಿರುತ್ತವೆ. ಯತಿಗಳು ನಡೆದುಕೊಂಡು ಹೋಗುವ ಸಂದರ್ಭ, ಇವುಗಳು ಸಾಯಬಾರದು. ಯತಿಗಳು ಯಾವುದೇ ಜೀವಿಗೆ ಹಾನಿ ಮಾಡಬಾರದು ಎಂಬ ಹಿನ್ನೆಲೆಯಲ್ಲಿ, ಚಾತುರ್ಮಾಸ ವ್ರತದ ಸಮಯದಲ್ಲಿ ಒಂದೇ ಕಡೆ ಕುಳಿತಿರಬೇಕು ಎಂದು ಹೇಳಲಾಗಿದೆ. ಕಾಣಿಯೂರು ಮೂಲ ಮಠ ಪುತ್ತೂರಿನಲ್ಲೇ ಇರುವುದರಿಂದ ಇಲ್ಲಿ ಚಾತುರ್ಮಾಸ ವ್ರತ ಕೈಗೊಳ್ಳಬೇಕು ಎಂಬ ಆಕಾಂಕ್ಷೆ ಇತ್ತು. ಈ ಬಾರಿ ಇದು ಈಡೇರಿದೆ ಎಂದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ಹಿಂದುತ್ವದ ಆಧಾರದಲ್ಲಿ ನಮ್ಮ ದೇಶ ಪರಂಪರೆಯನ್ನು ಉಳಿಸಿಕೊಂಡಿದೆ. ದೇಶದ ಭವಿಷ್ಯವು ಆಧ್ಯಾತ್ಮಿಕ ಬದುಕಿನ ಮೇಲೆ ನಿಂತಿದೆ. ಪ್ರೀತಿ, ವಿಶ್ವಾಸದ ಸಹಬಾಳ್ವೆ ಗುರುಪರಂಪರೆಯ ಮೂಲಕ ನಡೆಯುತ್ತಿದೆ. ಈ ಮೂಲಕ ದೇಶ ಮತ್ತೂಮ್ಮೆ ಜಗದ್ಗುರು ಆಗಲಿದೆ ಎಂದರು. ಚಾತುರ್ಮಾಸ ಸಮಿತಿ ಗೌರವಾಧ್ಯಕ್ಷ ಕುಂಟಾರು ರವೀಶ ತಂತ್ರಿ ಮಾತನಾಡಿ, ಸಮಾಜದ ಒಳಿತಿಗಾಗಿ ಅಧ್ಯಾತ್ಮ ಪರಂಪರೆ ಉಳಿಯಬೇಕು. ಕಾವಿ ನೋಡಿದಾಗ ನಮಸ್ಕಾರ ಮಾಡಬೇಕು ಎಂಬ ಭಾವನೆ ಅಷ್ಟಕ್ಕೇ ಸೀಮಿತ ಆಗಬಾರದು. ಧರ್ಮಕ್ಕೆ ಬೆಳಕು ಚೆಲ್ಲುವ ಕೆಲಸಕ್ಕೆ ಸಹಕರಿಸಿ ಎಂದರು.

ಪ್ರಾಸ್ತಾವಿಕ ಮಾತನಾಡಿದ ಚಾತುರ್ಮಾಸ ಸಮಿತಿ ಸಂಚಾಲಕ ಪ್ರೀತಂ ಪುತ್ತೂರಾಯ, ಮೊದಲ ಬಾರಿಗೆ ಇಲ್ಲಿ ಯಕ್ಷಗಾನ ತಾಳಮದ್ದಳೆ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರತಿ ದಿನ ಸಂಜೆ 6ರಿಂದ ಆರಂಭಗೊಳ್ಳಲಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಉಡುಪಿ ಮಾದರಿಯಲ್ಲಿ ಶ್ರೀಕೃಷ್ಣನಿಗೆ ಶ್ರೀಗಳ ಉಪಸ್ಥಿತಿಯಲ್ಲಿ ಅಭಿಷೇಕ ನಡೆಯಲಿದೆ. ರಾತ್ರಿ ಕಡಬು, ಚಕ್ಕುಲಿ ಪ್ರಸಾದ ವಿತರಣೆ ಆಗಲಿದೆ ಎಂದರು. ಸಂಪ್ಯ ಕೃಷ್ಣಪ್ಪ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ಪಿ.ಜಿ. ಜಗನ್ನಿವಾಸ್‌ ರಾವ್‌, ಸ್ವಾಗತ ಸಮಿತಿ ಸದಸ್ಯ ರಾಜರಾಮ್‌ ಶೆಟ್ಟಿ ಕೋಲ್ಪೆಗುತ್ತು ಉಪಸ್ಥಿತರಿದ್ದರು. ಪ್ರೇಮಲತಾ ರಾವ್‌, ವಿನಯ ಪ್ರಾರ್ಥಿಸಿದರು. ಕಾರ್ಯಾಧ್ಯಕ್ಷ ಅರುಣ್‌ ಕುಮಾರ್‌ ಪುತ್ತಿಲ ಸ್ವಾಗತಿಸಿ, ಅಧ್ಯಕ್ಷ ರಾಜೇಶ್‌ ಬನ್ನೂರು ವಂದಿಸಿದರು.

LEAVE A REPLY

Please enter your comment!
Please enter your name here