Home ಧಾರ್ಮಿಕ ಸುದ್ದಿ ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ ಪುನಃ ಪ್ರತಿಷ್ಠೆ , ಬ್ರಹ್ಮಕಲಶಾಭಿಷೇಕ ಸಿದ್ಧತೆ

ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ ಪುನಃ ಪ್ರತಿಷ್ಠೆ , ಬ್ರಹ್ಮಕಲಶಾಭಿಷೇಕ ಸಿದ್ಧತೆ

2687
0
SHARE

ಬ್ರಹ್ಮಾವರ : ಕಲ್ಯಾಣಪುರ ಸಂತೆಕಟ್ಟೆ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಸಮಗ್ರ ಪುನರುತ್ಥಾನ ಕಾರ್ಯ ಅಂತಿಮ ಹಂತದಲ್ಲಿದ್ದು ನೂತನ ದೇವಾಲಯ ಪ್ರಾಸಾದಗಳನ್ನು ಹಾಗೂ ಧ್ವಜಸ್ತಂಭ ಸಮರ್ಪಿಸುವ ಪುಣ್ಯೋತ್ಸವಕ್ಕೆ ಶ್ರದ್ಧಾಸ್ಥಾನ ಸಿದ್ಧಗೊಳ್ಳುತ್ತಿದೆ.

ಎ.27ರಿಂದ ಮೇ 6ರ ಪರ್ಯಂತ ಸಾನ್ನಿಧ್ಯಗಳ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮ ಕಲಶಾಭಿಷೇಕ ಧಾರ್ಮಿಕ ವಿಧಿಗಳು ನಡೆಯಲಿವೆ.

ಭಕ್ತರ ಸಂಘಟನೆ
ಪುನರುತ್ಥಾನ ಸತ್ಕಾರ್ಯದ ಸಂಕಲ್ಪ ಸ್ವೀಕರಿಸಿದ ಜೀರ್ಣೋದ್ಧಾರ ಸಮಿತಿಯು ಸಮಾಜದ ಹಾಗೂ ಊರ- ಪರವೂರ ಭಕ್ತರನ್ನು ಸಂಘಟಿಸಿ ಸಾನ್ನಿಧ್ಯ ಸಂಕೋಚ ಹಾಗೂ ಬಾಲಾಲಯ ಪ್ರತಿಷ್ಠೆ ಮೂಲಕ ಜೀರ್ಣೋದ್ಧಾರ ಪ್ರಾರಂಭಿಸಿತು. ಸಂಕೋಚದಿಂದ ಮೊದಲ್ಗೊಂಡು ಪ್ರತಿಷ್ಠೆ ಯವರೆಗೆ ನಿರಂತರ ಭಜನೆ- ನಾಮಸಂಕೀರ್ತನೆ ನಡೆಯುತ್ತಿದೆ.

ವಿವಿಧ ಹಂತಗಳು
ಶಿಲಾಮುಹೂರ್ತದ ಬಳಿಕ ಮುಷ್ಟಿ ಕಾಣಿಕೆ, ಜೀರ್ಣೋದ್ಧಾರ ಹುಂಡಿ ಸ್ಥಾಪನೆಗಳಂತಹ ಾರ್ಯಕ್ರಮಗಳು ಸಮಾಜವನ್ನು ಮತ್ತು ಗ್ರಾಮಸ್ಥರನ್ನು ದೇವಾಲಯದತ್ತ ಸೆಳೆದವು. ದೇವಾಲಯ ಬಿಚ್ಚಿ ತೆಗೆಯುತ್ತಿರುವಂತೆ ಶ್ರೀ ದೇವಿ ಸಪ್ತಶತಿ ಪಾರಾಯಣ, ಶಿವ ಪಂಚಾಕ್ಷರೀ ಪಠನ, ಶ್ರೀ ಶಂಕರಾಚಾರ್ಯ ಅಷ್ಟೋತ್ತರ ನಾಮಾವಳಿ ಪಾರಾಯಣಗಳು ವೀರಭದ್ರ ದೇವರ ಸನ್ನಿ ಧಿಯಲ್ಲಿ ನಿರಂತರ ನಡೆದು ಬರುತ್ತಿವೆ.

ಮೂಲಸ್ಥಾನಕ್ಕೆ ಕಾಲ್ನಡಿಗೆ
ಮೂಲಸ್ಥಾನ ಎಂದು ನಂಬಲಾಗುವ ಬಾರಕೂರಿನ ವೀರಭದ್ರ ದೇವರ ಸನ್ನಿಧಿಗೆ ಕಾಲ್ನಡಿಗೆಯ ಮೂಲಕ ತೆರಳಿ ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು. ಜೀರ್ಣೋದ್ಧಾರ ಕಾರ್ಯ ಪೂರ್ವದಲ್ಲಿ ಹೇಳಲಾದ ಪ್ರಾಯಶ್ಚಿತ್ತ ವಿಧಿಯನ್ನು ನಿರ್ವಹಿಸಲಾಯಿತು.

ಧ್ವಜಸ್ತಂಭ
ನೂತನ ಧ್ವಜಸ್ತಂಭಕ್ಕಾಗಿ ಮರ ಶೋಧದ ಬಳಿಕ ವನಪೂಜೆ ನೆರವೇರಿಸಿ ಭವ್ಯ ಮೆರವಣಿಗೆಯಲ್ಲಿ ಮರವನ್ನು ಸನ್ನಿಧಾನಕ್ಕೆ ತಂದು ದಾರು ಸಂಸ್ಕಾರದ ಅನಂತರ ಎಣ್ಣೆಯಲ್ಲಿ ಮುಳುಗಿಸಿ ಇಡಲಾಗಿತ್ತು. ಇದೀಗ ಧ್ವಜಸ್ತಂಭ ನೆಟ್ಟು ತಾಮ್ರ ಮುಚ್ಚಲಾಗುತ್ತಿದೆ. ದೇವರ ಗರ್ಭಗುಡಿಗಳನ್ನು ತೀರ್ಥ ಮಂಟಪ ಸಹಿತ ಶಿಲಾಮಯವಾಗಿ ನಿರ್ಮಿಸಲಾಗಿದ್ದು ನೂತನ ರಚನೆಗಳು ಶಿಲಾಶಿಲ್ಪಗಳಿಂದ ಕಂಗೊಳಿಸುತ್ತಿವೆ.

ಬ್ರಹ್ಮಲಿಂಗ ಗುಡಿಯನ್ನು ಪ್ರತ್ಯೇಕವಾಗಿ ಸುಂದರವಾಗಿ ನಿರ್ಮಿಸಲಾಗಿದೆ. ದೈವ ಗಳ ಮೂರು ಗುಡಿಗಳ ನಿರ್ಮಾಣ ಶೈಲಿಯಲ್ಲಿ ದಾರುಶಿಲ್ಪ ಮಾದರಿಗಳು ಎದ್ದು ಕಾಣುತ್ತಿವೆ. ಉಳಿದಂತೆ ದೇವಾಲಯದ ಪ್ರತಿಯೊಂದು ಅಂಗಗಳನ್ನು ಮತ್ತು ವಿವಿಧ ಉಪ ಹಾಗೂ ಪರಿವಾರ ಸನ್ನಿಧಾನಗಳನ್ನು ಯಥಾಶಾಸ್ತ್ರೀಯವಾಗಿ ಅಣಿಗೊಳಿಸಲಾಗುತ್ತಿದೆ. ಬ್ರಹ್ಮಕಲಶಾಭಿಷೇಕ ಸಮಿತಿಯು ಬೇರೆ ಬೇರೆ ಸಂಘಟನೆಗಳನ್ನು ಸಂಘಟಿಸಿ ಸ್ವಯಂಸೇವಕರ ತಂಡಗಳನ್ನು ರಚಿಸಿದೆ. ದೇವಾಲಯ ಅಲಂಕಾರ ಸಹಿತ ಊರಿನ ಅಲಂಕಾರ, ಅತಿಥಿ ಸತ್ಕಾರ, ಅನ್ನಸಂತರ್ಪಣೆ ಹೀಗೆ ಬ್ರಹ್ಮಕಲಶಾಭಿಷೇಕ ಪುಣ್ಯೋತ್ಸವದ ಸುಗಮ ನಿರ್ವಹಣೆಗಾಗಿ ಸರ್ವ ಸಿದ್ಧತೆಗಳಾಗಿವೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here