ಮಲ್ಪೆ : ವೆಲಂಕಣಿ ಮಾತೆಯ ಪ್ರಸಿದ್ಧ ಕಾರಣಿಕ ಕ್ಷೇತ್ರ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್ನ ಪ್ರತಿಷ್ಠಾಪನಾ ಮಹೋತ್ಸವವು ದೇವಾಲಯದಲ್ಲಿ ನಡೆಯಿತು.
ಬಳ್ಳಾರಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಹೆನ್ರಿ ಡಿ’ಸೋಜಾ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿ ದೇವರು ಸೃಷ್ಟಿಯ ಆರಂಭ ದಿಂದಲೇ ತಮ್ಮ ಆಶೀರ್ವಾದ ನಮ್ಮ
ಮೇಲೆ ಹರಿಸಿದ್ದಾರೆ. ಆದರೆ ಮನುಷ್ಯ ಇದನ್ನು ಉಳಿಸಿಕೊಳ್ಳುವಲ್ಲಿ ವಿಫಲನಾಗಿದ್ದಾನೆ. ಮತ್ತೆ ದೇವರು ಅಬ್ರಹಾಂನ ಮೂಲಕ ತನ್ನ ಪ್ರಜೆಗಳನ್ನು ಆಶೀರ್ವದಿಸಿ ದರು. ಈ ಆಶೀರ್ವಾದವು ಸರ್ವರಿಗೂ ಸಲ್ಲುವಂತಹದ್ದು. ಮಾತೆ ಮೇರಿಯನ್ನು ಆಶೀರ್ವದಿಸಿದ ದೇವರು ನಮ್ಮೆಲ್ಲರನ್ನು ಆಶೀರ್ವದಿಸುತ್ತಾನೆ ಎಂದರು.
ಉಡುಪಿಯ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೋ ಅವರು ಪ್ರಧಾನ ಧರ್ಮ ಗುರುಗಳಾಗಿ ಬಲಿಪೂಜೆ ನೆರವೇರಿಸಿ ಮಾತನಾಡಿ ಇಂದು ನಾವು ಈ ಪ್ರತಿಷ್ಠಾಪನಾ ಮಹೋತ್ಸವದ ಜತೆಗೆ ದೇಶದ ಸ್ವಾತಂತ್ರ್ಯಾ ದಿನ ಹಾಗೂ ಮಾತೆ ಮರಿಯಮ್ಮನ ಸ್ವರ್ಗಾರೋಹಣದ ದಿನವನ್ನು ಕೂಡ ಆಚರಿಸಲಾಗುತ್ತಿದೆ. ಮಾತೆ ಮೇರಿಯವರು ಈ ದೇವಸೃಷ್ಟಿಗೆ ಅಲಂಕಾರವಿದ್ದಂತೆ. ತಮ್ಮನ್ನೇ ದೇವರಿಗೆ ಸಮರ್ಪಿಸಿದ್ದರು. ಸ್ವಾತಂತ್ರ್ಯಾ ಕೇವಲ ದೇಶಕ್ಕಲ್ಲ, ದೇಶದಲ್ಲಿ ಬದುಕುವ ಎಲ್ಲರಿಗೂ ಎಲ್ಲ ರೀತಿಯ ಸ್ವಾತಂತ್ರ್ಯಾ ಸಿಗಬೇಕಾದ ಅಗತ್ಯತೆ ಇದೆ ಎಂದರು.
ಇದೇ ಸಂದರ್ಭದಲ್ಲಿ ದಾನಿಗಳಿಗೆ ಹಾಗೂ ಹೆತ್ತವರಿಗೆ ಮೊಂಬತ್ತಿ ನೀಡಿ ಸಮ್ಮಾನಿಸಲಾಯಿತು. ಕಲ್ಮಾಡಿ ಚರ್ಚ್ನ ಧರ್ಮಗುರು ಫಾ| ಆಲ್ಬನ್ ಡಿ’ಸೋಜಾ, ಫಾ| ಚೇತನ್, ಫಾ| ಫ್ರೆಡ್ರಿಕ್ ಹಾಗೂ ವಿವಿಧ ಧರ್ಮಪ್ರಾಂತ್ಯದ ಧರ್ಮಗುರುಗಳು ಉಪಸ್ಥಿತರಿದ್ದರು.