ಪುತ್ತೂರು : ಇಲ್ಲಿನ ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರು ಸಾರ್ವಭೌಮರ ಬೃಂದಾವನ ಪ್ರತಿಷ್ಠಾಪನ 40ನೇ ವರ್ಷ ಸಂಭ್ರಮದ ಸಪ್ತ ದಿನಗಳ “ಮಾಣಿಕ್ಯೋತ್ಸವ’ ರವಿವಾರ ಆರಂಭಗೊಂಡಿತು.
ಉತ್ಸವದ ಅಂಗವಾಗಿ ಪ್ರಥಮ ದಿನವಾದ ರವಿವಾರ ಚಿತ್ರಾಪುರ ವೇ| ಮೂ| ಗೋಪಾಲಕೃಷ್ಣಾಚಾರ್ಯರ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ|ಮೂ| ರಾಘವೇಂದ್ರ ಉಡುಪರ ಆಚಾರ್ಯತ್ವ ದಲ್ಲಿ ಬೆಳಗ್ಗಿನಿಂದ ನಿರ್ಮಾಲ್ಯ ವಿಸರ್ಜನ ಪೂಜೆ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಗಣಪತಿಹೋಮ, ಪೂರ್ಣ ಗ್ರಹಶಾಂತಿ ಹೋಮ, ಪಂಚಾಮೃತಾಭಿಷೇಕ ನಡೆಯಿತು. ಬಳಿಕ ಭಜನ ಕಾರ್ಯಕ್ರಮ ನಡೆದು, ಶ್ರೀ ಗುರು ಸಾರ್ವಭೌಮರಿಗೆ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.
ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ರಾತ್ರಿ ವಾಸ್ತು ಪೂಜೆ, ವಾಸ್ತು ಹೋಮ, ಮಹಾಪೂಜೆ, ರಥೋತ್ಸವ ನಡೆದವು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗ ವಾಗಿ ಬೆಳಗ್ಗೆ ಮೀನಾಕ್ಷಿ ರಾವ್ ಕೊಂಬೆಟ್ಟು ಅವರಿಂದ ವೀಣಾ ವಾದನ ನಡೆಯಿತು.
ಶ್ರೀ ರಾಘವೇಂದ್ರ ಮಠದ ಕಾರ್ಯ ದರ್ಶಿ, ಮಾಣಿಕ್ಯೋತ್ಸವ ಸಮಿತಿ ಸಂಚಾಲಕ ಯು. ಪೂವಪ್ಪ, ಕೋಶಾಧಿಕಾರಿ ಎನ್. ಸುಬ್ರಹ್ಮಣ್ಯ ಕೊಳತ್ತಾಯ, ಟ್ರಸ್ಟಿ ಗಳಾದ ಬೆಟ್ಟ ಈಶ್ವರ ಭಟ್, ಗಣಪತಿ ನಾಯಕ್, ಕೆ. ವಾಸುದೇವ ಶೆಣೈ, ಮಾಣಿಕ್ಯೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ರೈ ಸವಣೂರು, ಪ್ರಧಾನ ಕಾರ್ಯದರ್ಶಿ ರಾಜೇಶ್ ಬನ್ನೂರು, ಕೋಶಾಧಿಕಾರಿ ಗಂಗಾಧರ ಪಿ., ಕಾರ್ಯ ದರ್ಶಿ ಭಾಸ್ಕರ ಬಾರ್ಯ, ವೀಣಾ ಕೊಳತ್ತಾಯ, ವಿನೋದ್ ಎ. ಕಲ್ಲಾರೆ, ಸಹಕಾರ್ಯದರ್ಶಿ ಎಚ್. ಉದಯ ಕುಮಾರ್, ಸುಧೀರ್ ಕಲ್ಲಾರೆ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡರು.