Home ಧಾರ್ಮಿಕ ಸುದ್ದಿ ಜೀರ್ಣೋದ್ಧಾರ: ಪ್ರಾರ್ಥನೆ, ಮುಷ್ಟಿ ಕಾಣಿಕೆ ಸಮರ್ಪಣೆ

ಜೀರ್ಣೋದ್ಧಾರ: ಪ್ರಾರ್ಥನೆ, ಮುಷ್ಟಿ ಕಾಣಿಕೆ ಸಮರ್ಪಣೆ

ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ

2208
0
SHARE

ರಥಬೀದಿ : ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಶಿಲಾಮಯ ಸುತ್ತುಪೌಳಿ, ಸುತ್ತುಪೌಳಿಯ ಮೇಲ್ಛಾವಣಿಗೆ ತಾಮ್ರದ ಹೊದಿಕೆ, ಗರ್ಭಗುಡಿಗಳ ಶಿಖರಕ್ಕೆ ಸ್ವರ್ಣಕಲಶ, ಧ್ವಜ ಸ್ತಂಭಕ್ಕೆ ಬೆಳ್ಳಿ ಮಡಾಯಿಸುವಿಕೆ, ಬ್ರಹ್ಮರಥ ಸೇರಿದಂತೆ ಜೀರ್ಣೋದ್ಧಾರ ಕಾರ್ಯಗಳ ಬಗ್ಗೆ ಸಾಮೂಹಿಕ ಪ್ರಾರ್ಥನೆ ಹಾಗೂ ಮುಷ್ಟಿಕಾಣಿಕೆ ಸಮರ್ಪಣೆ ಜು. 22ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಕ್ಷೇತ್ರದ ಶ್ರೀ ವಿನಾಯಕ, ಶ್ರೀ ಕಾಳಿಕಾಂಬೆಯ ಗರ್ಭಗುಡಿಗಳ ಪುನರ್‌ ನಿರ್ಮಾಣ, ಅಷ್ಟಬಂಧ ಬ್ರಹ್ಮ ಕಲಶೋತ್ಸವ 18 ವರ್ಷಗಳ ಹಿಂದೆ ಸಂಪನ್ನಗೊಂಡಿದೆ. 2015ರಲ್ಲಿ ಶ್ರೀ ಕ್ಷೇತ್ರದಲ್ಲಿ ಚಿತ್ರಕೂಟ ಮಾದರಿಯಲ್ಲಿ ನಾಗದೇವರ, ಪಂಜುರ್ಲಿ ದೈವ, ಗುಳಿಗ ದೈವ ಗುಡಿ ರಚಿಸಿ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಿದೆ.

ಇದೀಗ ಕ್ಷೇತ್ರದ ಸುತ್ತುಪೌಳಿ, ಧ್ವಜಸ್ತಂಭ ಶಿಥಿಲಾವಸ್ಥೆಯಲ್ಲಿದ್ದು, ಶಿಲಾಮಯ ಸುತ್ತು ಪೌಳಿ, ಮೇಲ್ವಾವಣಿಗೆ ತಾಮ್ರದ ಹೊದಿಕೆ, ನೂತನ ಧ್ವಜಸ್ತಂಭ ಇದಕ್ಕೆ ಬೆಳ್ಳಿ ಮಡಾಯಿಸುವಿಕೆ, ನೂತನ ಬ್ರಹ್ಮರಥ ಇತ್ಯಾದಿ ಬೃಹತ್‌ ಯೋಜನೆಯನ್ನು ಜೀರ್ಣೋದ್ಧಾರ ಸಮಿತಿ ಹಮ್ಮಿಕೊಂಡಿದೆ. ಸುತ್ತುಪೌಳಿಯ ಕಾಮಗಾರಿ ಪ್ರಗತಿಯಲ್ಲಿದೆ. ಕಾಷ್ಠಶಿಲ್ಪದ ಕೆಲಸಕ್ಕೆ ಮರದ ಆವಶ್ಯಕತೆಯಿದ್ದು ವಿಶ್ವಕರ್ಮ ಸಮಾಜ ಬಾಂಧವರು ತಮ್ಮ ತಮ್ಮ ಊರುಗಳಲ್ಲಿ ಮರಗಳು ಲಭ್ಯವಿದ್ದಲ್ಲಿ ದಾನಿಗಳು ಅದನ್ನು ಕ್ಷೇತ್ರಕ್ಕೆ ತಿಳಿಸಬೇಕು. ಈ ಬೃಹತ್‌ ಯೋಜನೆಗೆ ಪ್ರತೀ ವಿಶ್ವಕರ್ಮ ಸಮಾಜದ ಮನೆಗಳಿಂದ ಕನಿಷ್ಠ 10,000 ರೂ.ಗಳಿಗೂ ಮೇಲ್ಪಟ್ಟು ಕ್ಷೇತ್ರದ ಜೀರ್ಣೋದ್ಧಾರ ನಿಧಿಗೆ ನೀಡಬಹುದು. 2019ನೇ ಇಸವಿಯಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುವ ಯುಗಾದಿ ಉತ್ಸವದ ನಂತರ ಈಗಿರುವ ಸುತ್ತು ಪೌಳಿಯನ್ನು ಕಳಚಿ 2020ರ ಯುಗಾದಿಗೆ ಮುಂಚಿತವಾಗಿ ನೂತನ ಶಿಲಾಮಯ ಸುತ್ತು ಪೌಳಿಯ, ಧ್ವಜಸ್ತಂಭ, ಬ್ರಹ್ಮರಥ ನಿರ್ಮಾಣಗೊಳ್ಳಲಿದೆ.

ಅಂದಾಜು 9 ಕೋ. ರೂ.ಗಳ ಈ ಬೃಹತ್‌ ಯೋಜನೆಗೆ ಸಮಸ್ತ ಭಕ್ತಾದಿಗಳು ಸಹಕರಿಸಬೇಕು ಎಂದು ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ ಮತ್ತು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಧನಂಜಯ ಪಾಲ್ಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ದೇಣಿಗೆಯನ್ನು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಕಚೇರಿಯಲ್ಲಿ ನೀಡಿ ಸೂಕ್ತ ರಶೀದಿಯನ್ನು ಪಡೆಯಬಹುದು ಅಥವಾ ಜೀರ್ಣೋದ್ಧಾರ ಸಮಿತಿಯ ಬ್ಯಾಂಕ್‌ ಖಾತೆಗೆ ಜಮಾ ಮಾಡಿ ಪ್ರಧಾನ ಕಾರ್ಯದರ್ಶಿಯವರಿಗೆ ತಿಳಿಸಬಹುದಾಗಿದೆ.

ಮಧ್ಯಾಹ್ನದವರೆಗೆ ಅವಕಾಶ
ಶ್ರೀ ಕ್ಷೇತ್ರಕ್ಕೆ ಒಳಪಟ್ಟಿರುವ 8 ಪೇಟೆ, ಹತ್ತು ಸಮಸ್ತರ ಪ್ರತೀ ಮನೆಯಿಂದ ಮುಷ್ಟಿಕಾಣಿಕೆ ಸಮರ್ಪಣೆ ಮಾಡಬೇಕಾಗಿ, ಮಧ್ಯಾಹ್ನ 1.30 ತನಕ ಜರಗಲಿರುವ ಮುಷ್ಟಿ ಕಾಣಿಕೆ ಸಮರ್ಪಣೆಯ ಸಂದರ್ಭ ನೂತನ ರಜತ ಧ್ವಜಸ್ತಂಭಕ್ಕೆ ಬೆಳ್ಳಿ, ಚಿನ್ನದ ಕಲಶಕ್ಕೆ ಬೇಕಾಗುವ ಚಿನ್ನ ಮತ್ತು ದೇಣಿಗೆಯನ್ನು ನೀಡುವಂತೆ ಜೀರ್ಣೋದ್ಧಾರ ಸಮಿತಿ ತಿಳಿಸಿದೆ.

LEAVE A REPLY

Please enter your comment!
Please enter your name here